ಆ.27ರಂದು 'ಬಿಲ್ಲವರ ಗುತ್ತು ಬರ್ಕೆಗಳು' ಗ್ರಂಥ ಲೋಕಾರ್ಪಣೆ
ಮಂಗಳೂರು, ಆ.24: ಮುಂಬೈಯ ಗುರುತು ಪ್ರಕಾಶನ ಪ್ರಕಟಿಸಿರುವ ಬಾಬು ಶಿವ ಪೂಜಾರಿ ಪ್ರಧಾನ ಸಂಶೋಧಕರಾಗಿರುವ 'ಬಿಲ್ಲವರ ಗುತ್ತು ಬರ್ಕೆಗಳು' ಗ್ರಂಥ ಲೋಕಾರ್ಪಣೆ ಆ.27ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಬಾಬು ಶಿವ ಪೂಜಾರಿ ನೇತೃತ್ವ ತಂಡವು 2009ರಿಂದ ಬಿಲ್ಲವರ ಗುತ್ತು ಮನೆಗಳ ಶೋಧ ಆರಂಭಿಸಿ, ಒಂದು ದಶಕದ ಕಾಲ ಕ್ಷೇತ್ರಾಧ್ಯಯನದ ಮೂಲಕ ಈ ಕೃತಿ ಹೊರಬಂದಿದೆ ಎಂದರು.
ಕೃತಿಯನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಬಿಡುಗಡೆ ಮಾಡಲಿದ್ದಾರೆ. ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ರಾಜಕೀಯ ಮುಖಂಡರಾದ ಬಿ.ಕೆ.ಹರಿಪ್ರಸಾದ್, ವಿನಯಕುಮಾರ್ ಸೊರಕೆ, ಶಾಸಕ ಉಮಾನಾಥ ಕೋಟ್ಯಾನ್, ನವೀನ್ ಚಂದ್ರ ಡಿ. ಸುವರ್ಣ ಮುಂತಾದ ಗಣ್ಯರು, ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಬಿ.ಎಂ.ರೋಹಿಣಿ, ರಮಾನಾಥ ಕೋಟೆಕಾರ್, ಪ್ರೊ.ಎಂ.ಶಶಿಧರ ಕೋಟ್ಯಾನ್, ಸಂಕೇತ್ ಪೂಜಾರಿ ಮತ್ತು ಮುದ್ದು ಮೂಡುಬೆಳ್ಳೆ ಉಪಸ್ಥಿತರಿದ್ದರು.