ಮುಂಬೈಯಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯ ಸೆರೆ
ಮಂಗಳೂರು: ಡ್ರಗ್ಸ್ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಮುಂಬೈಯಿಂದ ಮಂಗಳೂರಿಗೆ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ 6.7 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಅಂಬಲಪಾಡಿಯ ಕುಂಜಗುಡ್ಡೆ ಹೌಸ್ ನಿವಾಸಿ ಅಖಿಲೇಶ್ (30) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 1.62 ಲಕ್ಷ ರೂ. ಮೌಲ್ಯದ 6.7 ಕೆಜಿ ನಿಷೇಧಿತ ಮಾದಕ ವಸ್ತು ಗಾಂಜಾ, ಮೊಬೈಲ್ ಫೋನ್, ನಗದು 660 ರೂ.ವನ್ನು ವಶಪಡಿಸಲಾಗಿದೆ. ಇವುಗಳ ಮೌಲ್ಯ 1.63 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಮುಂಬೈಯಿಂದ ಗಾಂಜಾ ಖರೀದಿಸಿಕೊಂಡು ಮುಲ್ಕಿ ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮುಲ್ಕಿ ಬಪ್ಪನಾಡುವಿನಲ್ಲಿ ದಾಳಿ ನಡೆಸಿದರು.
ಆರೋಪಿಯ ವಿರುದ್ಧ ಈ ಹಿಂದೆ ಕದ್ರಿ ಠಾಣೆಯಲ್ಲಿ ಕಳವು, ಮಲ್ಪೆಠಾಣೆಯಲ್ಲಿ ಮಾದಕ ವಸ್ತು ಮಾರಾಟ, ಹಿರಿಯಡ್ಕ ಠಾಣೆಯಲ್ಲಿ ಹಲ್ಲೆ, ಉಡುಪಿಯ ಸೆನ್ ಕ್ರೈಂ ಠಾಣೆಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಪ್ರಕರಣ ಸಹಿತ 6 ಪ್ರಕರಣಗಳು ದಾಖಲಾಗಿರುತ್ತದೆ.
ಸಿಸಿಬಿ ಘಟಕದ ಎಸಿಪಿ ಮನೋಜ್‌ಕುಮಾರ್ ನಾಯ್ಕ್‌ರ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್‌ಎಂ, ಎಸ್ಸೈಗಳಾದ ಸುದೀಪ್ ಎಂವಿ, ಎಎಸ್ಸೈಗಳಾದ ರಾಮ ಪೂಜಾರಿ, ಶೀನಪ್ಪಮತ್ತಿತರರು ಪಾಲ್ಗೊಂಡಿದ್ದರು.