ಪುತ್ತೂರು: ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಮುಸುಕುಧಾರಿ ತಂಡ

Update: 2023-09-07 14:19 GMT

ಪುತ್ತೂರು: ದರೋಡೆಕೋರರ ತಂಡವೊಂದು ಮನೆಗೆ ನುಗ್ಗಿ ಮನೆ ಮಂದಿಯನ್ನು ಕಟ್ಟಿ ಹಾಕಿ ನಗ ಮತ್ತು ನಗದು ದರೋಡೆ ನಡೆಸಿದ ಘಟನೆ ಗುರುವಾರ ಮುಂಜಾನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ನಡೆದಿದೆ.

ಕುದ್ಕಾಡಿ ನಿವಾಸಿ, ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಎಂಬವರ ಮನೆಯಲ್ಲಿ ದರೋಡೆ ನಡೆದಿದ್ದು, ಮುಂಜಾನೆ ಸುಮಾರು 2 ಗಂಟೆಯ ಅವಧಿಯಲ್ಲಿ ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ ದರೋಡೆಕೋರರು ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮುಸುಕುಧಾರಿಗಳಾದ 8 ಮಂದಿ ಈ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳ ತಂಡ ಗುರುಪ್ರಸಾದ್ ಅವರನ್ನು ಕಟ್ಟಿ ಹಾಕಿ ಅವರ ಕುತ್ತಿಗೆಗೆ ಚಾಕು ಹಿಡಿದು ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ಸುಮಾರು 40 ಸಾವಿರ ನಗದು ಹಾಗೂ ಸುಮಾರು 15 ಪವನ್ ಚಿನ್ನಾಭರಣವನ್ನು ದರೋಡೆ ನಡೆಸಿದ್ದಾರೆ.

ಸುಮಾರು 2 ಗಂಟೆಯ ವೇಳೆಗೆ ಒಳ ಬಂದ ದರೋಡೆಕೋರರ ತಂಡ ಬಳಿಕ ಸುಮಾರು ಒಂದೂವರೆ ಗಂಟೆಗಳ ತನಕ ಮನೆಯೊಳಗೆ ಇದ್ದು, ಮನೆಯ ಎಲ್ಲಾ ಕಡೆಗಳಲ್ಲಿಯೂ ಹುಡುಕಾಟ ನಡೆಸಿದ್ದಾರೆ. ತುಳು, ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು. ದರೋಡೆ ನಡೆಸುತ್ತಿದ್ದ ಸಂದರ್ಭ ಗುರುಪ್ರಸಾದ್ ಅವರ ಮೊಬೈಲನ್ನು ನೀರಿಗೆ ಹಾಕಿ ಹಾನಿ ಮಾಡಿದ್ದಾರೆ.

ಒಂಟಿ ಮನೆ ಟಾರ್ಗೆಟ್

ಗುರುಪ್ರಸಾದ್ ಅವರ ಮನೆಯ ಹತ್ತಿರದಲ್ಲಿ ಯಾವುದೇ ಮನೆಗಳಿಲ್ಲ. ನಿರ್ಜನ ಪ್ರದೇಶದಲ್ಲಿ ಒಂಟಿ ಮನೆ ಇರುವುದನ್ನು ಟಾರ್ಗೆಟ್ ಮಾಡಿಕೊಂಡಿರುವ ದರೋಡೆಕೋರರು ಮನೆಯ ಬಾಗಿಲು ಮುರಿದು ಒಳ ಪ್ರವೇಶ ಮಾಡಿದ್ದಾರೆ. ಮನೆ ದರೋಡೆಯಿಂದಾಗಿ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಡಿವೈಎಸ್‍ಪಿ ಗಾನ ಪಿ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

"ಮನೆಯಲ್ಲಿ ಹೆಚ್ಚಾಗಿ ನಾನೊಬ್ಬನೇ ಇರುತ್ತಿದ್ದೆ. ನಿನ್ನೆ ಪಕ್ಕದ ಮನೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ನನ್ನ ತಾಯಿಯೂ ಮನೆಗೆ ಆಗಮಿಸಿ ತಂಗಿದ್ದರು. ಅದರಿಂದಾಗಿ ನಾವಿಬ್ಬರು ಮನೆಯಲ್ಲಿದ್ದೆವು. ತಾಯಿಯ ಚಿನ್ನದ ಜೊತೆಗೆ ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ಚಿನ್ನಾಭರಣ, ನಗದು, ನನ್ನ ಪರ್ಸ್‍ನಲ್ಲಿದ್ದ ನಗದು ಹಣವನ್ನು ದರೋಡೆ ಮಾಡಿದ್ದಾರೆ. ಮನೆಗೆ ನುಗ್ಗಿದವರು ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು. ನನಗೆ ವೈಯುಕ್ತಿಕವಾಗಿ ಯಾರಲ್ಲೂ ಹಗೆತನವಿಲ್ಲ".

-ಗುರುಪ್ರಸಾದ್ ರೈ , ದರೋಡೆಗೆ ಒಳಗಾದ ಮನೆ ಯಜಮಾನ

"ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಈ ಕೃತ್ಯ ನಡೆದಿದ್ದು, ದೂರುದಾರರ ಪ್ರಕಾರ ಸುಮಾರು 40 ಸಾವಿರ ರೂ. ಹಾಗೂ ಚಿನ್ನ ದರೋಡೆ ಮಾಡಲಾಗಿದೆ. ದರೋಡೆ ಮಾಡಲಾದ ಚಿನ್ನ ಎಷ್ಟು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ಶ್ವಾನದಳ, ವಿಧಿ ವಿಜ್ಞಾನ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ದರೋಡೆಕೋರರನ್ನು ಶೀಘ್ರವೇ ಬಂಧಿಸಲಾಗುವುದು. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪೊಲೀಸರ ಒಂದು ವಿಶೇಷ ತಂಡವನ್ನು ರಚಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು. ಪುತ್ತೂರು ಆಸುಪಾಸಿನಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆಯೂ ಸೂಕ್ತ ತನಿಖೆ ಆರಂಭಿಸಲಾಗುವುದು.

-ಸಿ.ಬಿ. ರಿಷ್ಯಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News