ಪುತ್ತೂರು: ಸೌಜನ್ಯಾ ಹತ್ಯೆ ಪ್ರಕರಣ; ಮರುತನಿಖೆಗೆ ಒತ್ತಾಯಿಸಿ ಪಾದಯಾತ್ರೆ, ರಸ್ತೆ ತಡೆ

Update: 2023-08-14 14:05 GMT

ಪುತ್ತೂರು: 12 ವರ್ಷಗಳ ಹಿಂದೆ ಕೊಲೆಯಾದ ಸೌಜನ್ಯ ನಮ್ಮ ಸಹೋದರಿ ಎಂದು ಪರಿಗಣಿಸಿ ಸಾವಿರಾರು ಮಂದಿ ಪಕ್ಷ, ಜಾತಿ ಮರೆತು ಒಂದಾಗಿದ್ದಾರೆ. ಅಮಾನುಷವಾಗಿ ಹತ್ಯೆ ಮಾಡಿದ ದುರುಳರನ್ನು ಗಲ್ಲಿಗೇರಿಸಿಯೇ ಸಿದ್ಧ ಎಂದು ಸಂಕಲ್ಪ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಸಂಘರ್ಷದ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಸೌಜನ್ಯಾ ಹತ್ಯೆ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಪುತ್ತೂರಿನಲ್ಲಿ ಸೋಮವಾರ ಪುತ್ತಿಲ ಪರಿವಾರದ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಹಾಗೂ ರಸ್ತೆ ತಡೆ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

6 ವರ್ಷಗಳ ಕಾಲ ಜೈಲಿನಲ್ಲಿ ಕೊಳೆತ ಬಳಿಕ ಸಂತೋಷ್ ರಾವ್‍ನನ್ನು ನಿರಪರಾಧಿ ಎಂದು ಘೋಷಿಸಲಾಗಿದೆ. ಹಾಗಾದರೆ ಅತ್ಯಾಚಾರ ಮಾಡಿ ಕೊಲೆ ಮಾಡಿದವರು ಯಾರು ? ಈ ಯಕ್ಷ ಪ್ರಶ್ನೆಗೆ ಉತ್ತರಕ್ಕಾಗಿ ಹಾಗೂ ಸೌಜನ್ಯಾಳಿಗೆ ನ್ಯಾಯಕ್ಕಾಗಿ ಆಂದೋಲನದ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಘರ್ಷ ನಡೆಯುವುದೋ ಎಂಬಂತೆ ಹೋರಾಟ ಕಾವು ಪಡೆಯುತ್ತಿದೆ. ಆಡಳಿತ ವ್ಯವಸ್ಥೆ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಸೌಜನ್ಯಾ ಹತ್ಯೆಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಗೂ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ಗಳಾದ ಅಭಿಷೇಕ್ ಗೋಯಲ್, ಸುದರ್ಶನ್, ಯೋಗೀಶ್ ಅವರನ್ನು ಸರಕಾರ ಎಸ್.ಐ.ಟಿ. ತನಿಖೆಗೆ ಒಳಪಡಿಸಬೇಕು. ಪ್ರಕರಣದ ಮರು ತನಿಖೆ ಮಾಡಿದರೆ ಮಾತ್ರ ಸೌಜನ್ಯಾಗೆ ನ್ಯಾಯ ಸಿಗಲು ಸಾಧ್ಯ ಎಂದು ಪುತ್ತಿಲ ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ಶ್ರೀಕೃಷ್ಣ ಉಪಾಧ್ಯಾಯ ಮೊದಲಾದವರು ಹಾಜರಿದ್ದರು.

ಬೆಳಗ್ಗೆ 10.45 ಕ್ಕೆ ದರ್ಬೆಯಿಂದ ಆರಂಭಗೊಂಡ ಪಾದಯಾತ್ರೆ ಬಸ್ ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯ ತನಕ ನಡೆ ಯಿತು. ಸಾವಿರಾರು ಸಂಖ್ಯೆಯ ಜನರು ಸೌಜನ್ಯಾ ಪರ ಭಿತ್ತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ಕಾಲ್ನಡಿಗೆ ಯಲ್ಲಿ ಆಗಮಿಸಿದರು. ಗಾಂಧಿ ಕಟ್ಟೆಯ ಬಳಿ ಸುಮಾರು 20 ನಿಮಿಷಗಳ ಕಾಲ ಮುಖ್ಯರಸ್ತೆಯನ್ನು ಬಂದ್ ರಸ್ತೆಯಲ್ಲೇ ನಿಂತು ಪ್ರತಿಭಟನ ಸಭೆ ನಡೆಯಿತು. ಪೊಲೀಸರು ಬಂದೋಬಸ್ತ್ ಒದಗಿಸಿದರು.

ಮೆರವಣಿಗೆ ಹಾಗೂ ಪ್ರತಿಭಟನ ಸಭೆಯ ಸಂದರ್ಭದಲ್ಲಿ ಪುತ್ತಿಲ ಪರಿವಾರದ ವಿನಂತಿಯಂತೆ ನಗರದ ಕೆಲವು ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು. ಕೆಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News