ರಾಜ್ಯೋತ್ಸವ ಪ್ರಶಸ್ತಿಯು ‘ಮೀಫ್’ ಅರ್ಹತೆಗೆ ಸಂದ ಫಲ: ‘ಕೃತಜ್ಞತಾ ಸ್ನೇಹ ಸಮ್ಮಿಲನ’ದಲ್ಲಿ ಸ್ಪೀಕರ್ ಖಾದರ್

Update: 2023-11-28 17:49 GMT

ಮಂಗಳೂರು: ಮಾಜಿ ಸಚಿವ ಬಿ.ಎ. ಮೊಯ್ದಿನ್ ಅವರ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಮುಸ್ಲಿಮ್ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್ (ಮೀಫ್) ಕಳೆದ 20ಕ್ಕೂ ಅಧಿಕ ವರ್ಷದಲ್ಲಿ ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕ ಜಾಗೃತಿಯನ್ನುಂಟು ಮಾಡಿರುವುದು ಶ್ಲಾಘನೀಯ. ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ‘ಮೀಫ್’ಗೆ ಲಭಿಸಿರುವುದು ಅದರ ಅರ್ಹತೆಗೆ ಸಂದ ಫಲವಾಗಿವೆ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಯ ಲಭಿಸಿರುವ ಹಿನ್ನೆಲೆಯಲ್ಲಿ ‘ಮೀಫ್’ ಸಂಸ್ಥೆಯು ನಗರದ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಆಯೋಜಿಸಿದ ಮಂಗಳವಾರ ‘ಸಂಭ್ರಮಾಚರಣೆ-ಕೃತಜ್ಞತಾ ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಯಾರೇ ಉಪಕಾರ ಮಾಡಿದರೂ ಅದನ್ನು ಜೀವನಪೂರ್ತಿ ನೆನಪಿನಲ್ಲಿಟ್ಟು ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬ ವ್ಯಕ್ತಿಯ ಮಾನವೀಯ ಗುಣಗಳಲ್ಲಿ ಒಂದಾಗಿವೆ. ‘ಮೀಫ್’ನ ಈ ಸಾಧನೆಯ ಹಿಂದೆ ವಿದ್ಯಾರ್ಥಿಗಳ, ಶಿಕ್ಷಕರ, ಆಡಳಿತ ಸಂಸ್ಥೆಗಳ ಮುಖ್ಯಸ್ಥರ ಶ್ರಮವಿದೆ. ಸಹಜವಾಗಿ ಇವರೆಲ್ಲರಿಗೂ ಕೃತಜ್ಞತೆ ಸಲ್ಲಬೇಕಿದೆ. ಆ ಕೆಲಸವನ್ನು ಮೀಫ್ ಮಾಡಿರುವುದು ಅಭಿನಂದನೀಯ ಎಂದರು.

‘ಮೀಫ್’ಗೆ ಲಭಿಸಿದ ಈ ಪುರಸ್ಕಾರವು ಕರಾವಳಿಯ ಶಿಕ್ಷಣ ಸಂಸ್ಥೆಗಳಿಗೆ ಸಂದ ಗೌರವವೂ ಆಗಿದೆ. ಇತರ ಸಂಸ್ಥೆಗಳಿಗೆ ‘ಮೀಫ್’ನ ಈ ಸಾಧನೆ ಸ್ಫೂರ್ತಿಯಾಗಲಿದೆ ಎಂದು ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರಿನ ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಇದರ ನಿರ್ದೇಶಕಿ ನಫೀಸಾ ಅಹ್ಮದ್ ‘ಮುಸ್ಲಿಮರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ‘ಮೀಫ್’ನ ಸೇವೆಯು ಕರಾವಳಿಯ ಜಿಲ್ಲೆಗೆ ಸೀಮಿತವಾಗವಾಗಬಾರದು. ರಾಜ್ಯಾದ್ಯಂತ ಇದು ಕಾರ್ಯಾಚರಿಸಬೇಕು. ಆ ಮೂಲಕ ಸಮುದಾಯದಲ್ಲಿ ಶೈಕ್ಷಣಿಕ ಸಬಲೀಕರಣ ಮಾಡಲು ಮುಂದಾಗಬೇಕು’ ಎಂದು ಕರೆ ನೀಡಿದರು.

ಮುಸ್ಲಿಂ ಸಮುದಾಯವು ಶೈಕ್ಷಣಿಕವಾಗಿ ಅದರಲ್ಲೂ ಉನ್ನತ ಶಿಕ್ಷಣದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ವೃತ್ತಿಪರ ತರಬೇತಿ ಕೇಂದ್ರ ತೆರೆಯಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಫೀಸಾ ಅಹ್ಮದ್ ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಮಾತನಾಡಿ ‘ಜಿಲ್ಲೆಯ ಕೆಲವು ಕಡೆಗಳಲ್ಲಿ ಕಮ್ಯುನಿಟಿ ಸೆಂಟರ್‌ಗಳು ಕಾರ್ಯಾ ಚರಿಸುತ್ತಿವೆ. ಸ್ಪರ್ಧಾತ್ಮಕ ಯುಗದಲ್ಲಿ ಅಂತಹ ಸೆಂಟರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಅಲ್ಲದೆ ಅದನ್ನು ಜಿಲ್ಲಾದ್ಯಂತ ಸ್ಥಾಪಿಸಬೇಕು ಎಂದರು.

ಹಿಂದೆ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣವು ಮರೀಚಿಕೆಯಾಗಿತ್ತು. ಈಗ ಸರಕಾರವು ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡುತ್ತಿವೆ. ಅದನ್ನು ಸದುಪಯೋಗ ಪಡೆದುಕೊಳ್ಳುವ ಮೂಲಕ ಸಮುದಾಯದ ಎಲ್ಲರೂ ಶೈಕ್ಷಣಿಕವಾಗಿ ಮುಂದುವರಿಯಬೇಕಿದೆ ಎಂದು ಜಿ.ಎ.ಬಾವ ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೀಫ್ ಗೌರವಾಧ್ಯಕ್ಷ ಉಮರ್ ಟೀಕೆ ‘ಜಿಲ್ಲೆಯ 400ಕ್ಕೂ ಅಧಿಕ ಅನುದಾನ ರಹಿತ ಆಂಗ್ಲಮಾಧ್ಯಮ ಶಾಲೆಗಳ ಪೈಕಿ 183 ಮುಸ್ಲಿಂ ಶಿಕ್ಷಣ ಸಂಸ್ಥೆಗಳಿವೆ. ಈ ಮೂಲಕ ಕೆಥೋಲಿಕ್ ಶಿಕ್ಷಣ ಸಂಸ್ಥೆಗೆ ‘ಮೀಫ್’ ಸರಿಸಮಾನವಾಗಿ ಬೆಳೆಯುತ್ತಿವೆ. ಶಿಕ್ಷಣದ ಜೊತೆಗೆ ಸಾಮರಸ್ಯ ಬೆಸೆಯುವ ಕೆಲಸವನ್ನೂ ಈ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ’ ಎಂದರು.

‘ಮೀಫ್’ ಕಾರ್ಯಕ್ರಮಗಳನ್ನು ಮತ್ತಷ್ಟು ಸಕ್ರಿಯಗೊಳಿಸುವ ಸಲುವಾಗಿ ಪೂರ್ಣಪ್ರಮಾಣದ ‘ಕಾರ್ಯಾಲಯ’ ತೆರೆಯಲಾ ಗುವುದು. ಅರ್ಹ ಪ್ರತಿಭಾವಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಪ್ರವೇಶವಕಾಶ ಕಲ್ಪಿಸಲಾಗು ವುದು. ಪ್ಯಾರಾ ಮೆಡಿಕಲ್ ಸೀಟುಗಳನ್ನು ಅರ್ಹ ಪ್ರತಿಭಾವಂತರಿಗೆ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದ ಉಮರ್ ಟೀಕೆ, ಮುಸ್ಲಿಂ ಸಮುದಾಯದ ಸಬಲೀಕರಣಕ್ಕೆ ಜಿಲ್ಲಾ ಮಟ್ಟದಲ್ಲಿ ‘ಜಮಾಅತ್‌ಗಳ ಒಕ್ಕೂಟ’ ಸ್ಥಾಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ದ.ಕ. ಮತ್ತು ಉಡುಪಿ ಜಿಲ್ಲಾ ಜಂ ಇಯ್ಯತುಲ್ ಫಲಾಹ್ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಮಾಜಿ ಸಚಿವ ಬಿ.ಎ. ಮೊಯ್ದಿನ್ ಅವರ ಪುತ್ರ ಬಿ.ಎ. ಮುಸ್ತಾಖ್ ಮಾತನಾಡಿದರು. ಮೀಫ್ ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಮುಸ್ತಫಾ ಸುಳ್ಯ ‘ಮೀಫ್’ನ ಬೇಡಿಕೆಗಳ ಮನವಿ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಿದರು. ‘ಮೀಫ್’ನ ಅಗಲಿದ ನಾಯಕರ ಕುಟುಂಬಕ್ಕೆ ನೀಡಲಾದ ಸ್ಮರಣಿಕೆ ವಿತರಣಾ ಕಾರ್ಯಕ್ರಮವನ್ನು ಉಪಾಧ್ಯಕ್ಷ ಮುಮ್ತಾಝ್ ಅಲಿ ನಿರ್ವಹಿಸಿದರು. ‘ಮೀಫ್’ಗೆ ಬೆನ್ನೆಲು ಬಾಗಿ ನಿಂತ ವ್ಯಕ್ತಿ-ಸಂಘ ಸಂಸ್ಥೆಗಳಿಗೆ ನೀಡಲಾದ ಸ್ಮರಣಿಕೆಗಳ ವಿತರಣಾ ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು ನಿರ್ವಹಿಸಿದರು. ಉಪಾಧ್ಯಕ್ಷ ಶಬಿ ಅಹ್ಮದ್ ಖಾಝಿ ವಂದಿಸಿದರು. ಝಾಕಿಯಾ ಖತೀಜಾ ಮತ್ತು ದಿಲ್‌ದಾರ್ ಅಮ್ಜದ್ ಕಾರ್ಯಕ್ರಮ ನಿರೂಪಿಸಿದರು.

ಅಗಲಿದ ಮೀಫ್ ಸ್ಥಾಪಕ ಗೌರವಾಧ್ಯಕ್ಷ ಬಿ.ಎ.ಮೊಯ್ದಿನ್, ಮೀಫ್ ಸ್ಥಾಪಕ ಅಧ್ಯಕ್ಷ ಪಿ.ಎ.ಖಾದರ್ ಕುಕ್ಕಾಡಿ, ಮೀಫ್ ಮಾಜಿ ಅಧ್ಯಕ್ಷ ವೈ. ಮುಹಮ್ಮದ್ ಬ್ಯಾರಿ, ಮೀಫ್ ಸ್ಥಾಪಕ ಕೋಶಾಧಿಕಾರಿ ಯು.ಎಂ.ಮೊಯ್ದಿನ್ ಕುಂಞಿ, ಮೀಫ್ ಮಾಜಿ ಪ್ರಧಾನ ಕಾರ್ಯದರ್ಶಿ ಯು.ಎ. ಖಾಸಿಮ್ ಉಳ್ಳಾಲ್ ಅವರ ಕುಟುಂಬಕ್ಕೆ ಸ್ಮರಣಿಕೆ ನೀಡಲಾಯಿತು.

ಮೀಫ್‌ಗೆ ಬೆನ್ನೆಲುಬಾಗಿ ನಿಂತ ಜೋಕಟ್ಟೆಯ ಅಂಜುಮಾನ್ ಸಂಸ್ಥೆ, ಜಪ್ಪಿನಮೊಗರಿನ ಯೆನೆಪೊಯ ಶಾಲೆ, ಬೆಂಗಳೂರಿನ ಪ್ರೆಸಿಡೆನ್ಸಿ ಸ್ಕೂಲ್, ಅಡ್ಯಾರ್‌ನ ಬರಖಾ ಇಂಟರ್‌ನ್ಯಾಶನಲ್ ಸ್ಕೂಲ್, ವಾರ್ತಾಭಾರತಿ ದೈನಿಕ, ಜೆಎಎಂಡಬ್ಲ್ಯುಎ (ಜಮ್‌ವಾ) ಜೋಕಟ್ಟೆ, ಜಂ ಇಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲೆ, ಶಿಕ್ಷಣ ತರಬೇತುದಾರ ಪ್ರೊ.ರಾಜೇಂದ್ರ ಭಟ್, ಮೀಫ್ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಎ. ನಝೀರ್, ‘ಮೀಫ್’ ಸಂಸ್ಥೆಗೆ ಹೆಸರನ್ನು ಸೂಚಿಸಿದ್ದ ಎ.ಎಂ. ಆರೀಫ್ ಜೋಕಟ್ಟೆ (ಪರವಾಗಿ) ಅವರಿಗೆ ಸ್ಮರಣಿಕೆ ನೀಡಲಾಯಿತು.



























































Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News