ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನೇ ಸಭಾಂಗಣ ಮಾಡಿಕೊಂಡು ಕಾರ್ಯಕ್ರಮ ಆಯೋಜಿಸಿದ್ದ ಸಂಘಪರಿವಾರ; ಆರೋಪ

Update: 2024-03-10 17:05 GMT

ಮಂಗಳೂರು: ನಗರದ ಸೆಂಟ್ರಲ್‌ ರೈಲು ನಿಲ್ದಾಣವನ್ನು ಸಂಘಪರಿವಾರವು ಸಭಾಂಗಣ ಮಾಡಿಕೊಂಡು ಕಾರ್ಯಕ್ರಮ ಆಯೋಜಿಸಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಈ ವೀಡಿಯೊ ಇತ್ತೀಚೆಗೆ ಸಂಘಪರಿವಾರದ ಕಾರ್ಯಕರ್ತರು ಮಂಗಳೂರಿನಿಂದ ಅಯೋಧ್ಯೆಗೆ ತೆರಳುವಾಗ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಮಾಡಿದ್ದ ಕಾರ್ಯಕ್ರಮದ್ದು ಎನ್ನಲಾಗಿದೆ.

ವೈರಲ್‌ ವೀಡಿಯೊದಲ್ಲಿ ರೈಲು ನಿಲ್ದಾಣದಲ್ಲಿ ನೂರಾರು ಮಂದಿ ಕುಳಿತುಕೊಳ್ಳಲು ಮಾಡಲಾಗಿದ್ದ ಕುರ್ಚಿಗಳನ್ನು ಜೋಡಿಸಿರುವುದು ಕಾಣಿಸುತ್ತಿದೆ. ಮೈಕ್‌ ಬಳಸಿಕೊಂಡು ಆರೆಸ್ಸೆಸ್‌ನ ಪ್ರಾರ್ಥನೆ ಹೇಳುತ್ತಿರುವುದು ಹಾಗೂ ಅಲ್ಲಿರುವವರೆಲ್ಲರೂ ಆ ಪ್ರಾರ್ಥನೆಯನ್ನು ಪುನಾರಾವರ್ತಿಸುತ್ತಿರುವುದು ಕೇಳಿಸುತ್ತಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರೂ ಕೈ ಎತ್ತಿಕೊಂಡು ಪ್ರಾರ್ಥನೆ ಹೇಳುತ್ತಿರುವುದು ವೀಡಿಯೊದಲ್ಲಿದೆ.

ಪ್ರಾರ್ಥನೆ ಹೇಳುತ್ತಿರುವಾಗ ಪೊಲೀಸರು ನಿಂತಿರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. ಪ್ರಾರ್ಥನೆ ಹೇಳಲು ಸಂಘ ಪರಿವಾರದವರು ಬಳಸಿದ್ದ ಮೈಕ್‌ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡಲು ಬಳಸುವ ಮೈಕ್‌ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿಯಿಲ್ಲ.

ಸಾರ್ವಜನಿಕ ಸ್ಥಳ ಹಾಗೂ ಭದ್ರತೆಯ ದೃಷ್ಠಿಯಿಂದ ಸೂಕ್ಷ್ಮ ಸ್ಥಳವಾಗಿರುವ ರೈಲು ನಿಲ್ದಾಣವನ್ನು ಸಭಾಂಗಣದಂತೆ ಮಾರ್ಪಾಡು ಮಾಡಿಕೊಂಡು, ನೂರಾರು ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಿದವರು ಯಾರು? ಎಂದು ಸಾರ್ವಜನಿಕರು ಸರಕಾರ ಮತ್ತು ರೈಲ್ವೇ ಇಲಾಖೆಯನ್ನು ಪ್ರಶ್ನಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳು ಭಾರೀ ಪ್ರಮಾಣದಲ್ಲಿ ವೈರಲ್‌ ಆಗುತ್ತಿದ್ದರೂ, ರೈಲು ನಿಲ್ದಾಣದ ಭದ್ರತೆಗೆ ಅಡ್ಡಿ ಪಡಿಸಿರುವ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡಿರುವ ಕುರಿತು ರೈಲು ನಿಲ್ದಾಣದ ಅಧಿಕಾರಿಗಳು ಈ ವರೆಗೆ ಯಾವುದೇ ದೂರನ್ನು ದಾಖಲಿಸಿರುವ ವರದಿ ಬಂದಿಲ್ಲ. ರೈಲ್ವೇ ಪೊಲೀಸರಿಂದಲೂ ಯಾವುದೇ ಕ್ರಮವಾದ ಬಗ್ಗೆ ಮಾಹಿತಿಯಿಲ್ಲ.

ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಪಾಲಿಸಬೇಕಾಗಿದ್ದ ನಿಯಮಗಳನ್ನು ಪಾಲಿಸದೇ ಈ ರೀತಿ ಸಂಘಪರಿವಾರದ ಕಾರ್ಯಕ್ರಮ ನಡೆಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ನಗರದ ಹೃದಯಭಾಗದಲ್ಲಿರುವ ರೈಲು ನಿಲ್ದಾಣದಲ್ಲಿ ಭದ್ರತೆಗೆ ಸವಾಲಾಗಿರುವ, ಕಾನೂನುಗಳನ್ನು ಗಾಳಿಗೆ ತೂರಿರುವ ಸಂಘಪರಿವಾರ ಕಾರ್ಯಕರ್ತರ ಮೇಲೆ ಮಂಗಳೂರು ನಗರ ಪೊಲೀಸರೂ ಸ್ವಯಂ ಪ್ರೇರಿತ ಪ್ರಕರಣ ದಾಖಸಿ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News