ಅನಿವಾಸಿಗಳಿಗೆ ಪ್ರತ್ಯೇಕ ಸಚಿವಾಲಯ ಶೀಘ್ರ ಶುರುವಾಗಲಿ: ಶೇಖ್ ಕರ್ನಿರೆ
ಮಂಗಳೂರು, ಫೆ. 22 : ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರಕಾರಕ್ಕೆ ಎಲ್ಲ ಅನಿವಾಸಿಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರ ವಿಶೇಷ ಆಹ್ವಾನದ ಮೇರೆಗೆ ಬುಧವಾರ ಬೆಂಗಳೂರಿಗೆ ಭೇಟಿ ನೀಡಿದ್ದ ಸುಮಾರು 15 ದೇಶಗಳ ಅನಿವಾಸಿ ಕನ್ನಡಿಗರ ನಿಯೋಗಕ್ಕೆ ರಾಜ್ಯ ಸರಕಾರ ಸ್ಪಂದಿಸಿರುವ ರೀತಿ ನಮಗೆಲ್ಲರಿಗೂ ಬಹಳ ಸಂತಸ ತಂದಿದೆ ಎಂದು ಖ್ಯಾತ ಅನಿವಾಸಿ ಕನ್ನಡಿಗ, ಸೌದಿ ಅರೇಬಿಯಾದ ಜುಬೈಲ್ ನಲ್ಲಿರುವ ಪ್ರತಿಷ್ಠಿತ ಎಕ್ಸ್ಪರ್ಟೈಸ್ ಕಂಪೆನಿಯ ಉಪಾಧ್ಯಕ್ಷ ಕೆ.ಎಸ್ ಶೇಖ್ ಕರ್ನಿರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೌದಿ ಅರೇಬಿಯಾದ ದಮಾಮ್ ನಲ್ಲಿ ಸರ್ವಧರ್ಮೀಯ ಅನಿವಾಸಿ ಕನ್ನಡಿಗರು ಸೇರಿ ಇತ್ತೀಚೆಗೆ ಅದ್ದೂರಿಯಾಗಿ ನಡೆಸಿದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಫಲಶ್ರುತಿಯಾಗಿ ಇದೀಗ ರಾಜ್ಯ ಸರಕಾರ ಅನಿವಾಸಿ ಕನ್ನಡಿಗರ ನಿಯೋಗವನ್ನು ಬರಮಾಡಿಕೊಂಡು ಅವರ ಅಹವಾಲನ್ನು ಕೇಳಿದೆ. ಮುಖ್ಯಮಂತ್ರಿಗಳು, ಸಚಿವರು, ಉಭಯ ಸದನಗಳ ಸ್ಪೀಕರ್ ಗಳು ನಿಯೋಗವನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸ್ಪೀಕರ್ ಯು ಟಿ ಖಾದರ್ ಅವರ ವಿಶೇಷ ಮುತುವರ್ಜಿಯಿಂದಾಗಿ ವಿಧಾನ ಸಭೆಯಲ್ಲಿ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಬಗ್ಗೆಯೇ ವಿಶೇಷ ಚರ್ಚೆ ಕೂಡ ನಡೆದಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಇದೊಂದು ಧನಾತ್ಮಕ ಬೆಳವಣಿಗೆ. ಮುಂದಿನ ದಿನಗಳಲ್ಲಿ ಅನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಆಗಿದ್ದ ಶೇಖ್ ಕರ್ನಿರೆ ಹೇಳಿದ್ದಾರೆ.
ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ 100 ಕೋಟಿ ರೂಪಾಯಿ ಅನುದಾನವನ್ನು ಕೇಳಿದ್ದೇವೆ. ಕೇರಳ ಸರಕಾರ ರಾಜ್ಯದ ಬೆಳವಣಿಗೆಯಲ್ಲಿ ಅನಿವಾಸಿಗಳ ಕೊಡುಗೆಯನ್ನು ಗುರುತಿಸಿ ಅವರಿಗಾಗಿ ವಿಶೇಷ ಅನುದಾನ ಹಾಗು ವಿಶೇಷ ಇಲಾಖೆಯನ್ನೇ ಸ್ಥಾಪಿಸಿ ಪ್ರೋತ್ಸಾಹಿಸಿದೆ. ಅದೇ ರೀತಿ ಕರ್ನಾಟಕ ಸರಕಾರವೂ ಮಾಡಿದರೆ ಅದರಿಂದ ಅನಿವಾಸಿಗಳಿಗೆ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಿ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಅದರಿಂದ ರಾಜ್ಯದ ಯುವಜನರಿಗೆ ವಿದೇಶಗಳಲ್ಲಿ ಇನ್ನಷ್ಟು ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಶೇಖ್ ಕರ್ನಿರೆ ಹೇಳಿದ್ದಾರೆ.
ಈ ಸರಕಾರ ಬಂದ ಮೇಲೆ ಅನಿವಾಸಿಗಳ ಕೋಶ ಸಕ್ರಿಯವಾಗಿದೆ. ಸರಕಾರ ಹಾಗು ಅನಿವಾಸಿಗಳ ಬಂಧ ಇನ್ನಷ್ಟು ಗಟ್ಟಿಯಾಗಬೇಕು. ಅವರ ನಡುವಿನ ಸಂವಹನ ಹೆಚ್ಚಿದಷ್ಟೂ ರಾಜ್ಯಕ್ಕೆ, ಜನರಿಗೆ ಅದರಿಂದ ಲಾಭವಾಗಲಿದೆ. ಅನಿವಾಸಿಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಹಾಗು ನೂರು ಕೋಟಿ ರೂಪಾಯಿ ಅನುದಾನ ಶೀಘ್ರ ಜಾರಿಯಾಗಲಿ ಎಂದು ಶೇಖ್ ಕರ್ನಿರೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.