ಸುರತ್ಕಲ್| ಕಾನ ಸರಕಾರಿ ಶಾಲೆಯ ಭೂ ವಿವಾದ; ಭೂ ಮಾಪನಾಧಿಕಾರಿ ಅಮಾನತು

Update: 2023-12-02 17:57 GMT

ಸುರತ್ಕಲ್, ಡಿ.2: ಕಾನ ಕಟ್ಲ ಜನತಾ ಕಾಲನಿಯ ದ.ಕ. ಜಿಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ಭೂ ಮಾಪನಾಧಿಕಾರಿಯೊಬ್ಬರುನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ.

ಸದ್ಯ ಬೆಳ್ತಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಭೂ ಮಾಪನಾಧಿಕಾರಿ ನಿಝಾಮ್ ಅಮಾನತುಗೊಂಡ ಅಧಿಕಾರಿ.

ನಿಝಾಮ್ ಸುರತ್ಕಲ್ ವಲಯ ಭೂ ಮಾಪನಾಧಿಕಾರಿಯಾಗಿದ್ದ ಸಂದರ್ಭ ಸದ್ಯ ಸರಕಾರಿ ಶಾಲೆ ಮತ್ತು ಆಟದ ಮೈದಾನವಿರುವ ಭೂಮಿಯನ್ನು ಅಳೆದು ಖಾಸಗಿ ನಿವೇಶನ ಎಂದು ಜಮೀನಿನ ಮಾಲಕರಿಗೆ ಪ್ರಾಪರ್ಟಿ ಕಾರ್ಡ್ ನೀಡಿದ್ದರು. ಆದರೆ, ಈ ಪ್ರಕ್ರಿಯೆ ಅಲ್ಲಿಗೇ ಪೂರ್ಣಗೊಂಡಿರುವುದಿಲ್ಲ. ಯಾಕೆಂದರೆ, ಎಲ್ಲ ಪ್ರಕರಣಗಳಲ್ಲೂ ಸರ್ವೇ ಮಾಡಿದ ಬಳಿಕ ಸಾಮಾನ್ಯವಾಗಿ ಪ್ರಾಪರ್ಟಿ ಕಾರ್ಡ್ ನೀಡಲಾಗುತ್ತದೆ. ಅಂತಿಮ ಹಂತದ ವಿಚಾರಣೆಯ ಬಳಿಕ ಪೂರ್ಣ ರೂಪದ ಪ್ರಾಪರ್ಟಿ ಕಾರ್ಡ್‌ನ್ನು ಭೂಮಿಯ ಮಾಲಕರಿಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಸದ್ಯ ಜನತಾ ಕಾಲನಿಯ ಶಾಲೆ ಮತ್ತು ಆಟದ ಮೈದಾನದ ಪ್ರಾಪರ್ಟಿ ಕಾರ್ಡ್ ಅಂತಿಮಗೊಂಡಿರದ ಕಾರಣ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಆ ನಿವೇಶನವನ್ನು ಶಾಲೆಗೆ ಬಿಟ್ಟು ಕೊಡುವ ಅವಕಾಶಗಳು ಇವೆ ಎಂದು ಮೂಲಗಳು ಮಾಹಿತಿ ನೀಡಿವೆ.

"ಕಳೆದ ಎರಡು ವರ್ಷಗಳ ಹಿಂದಷ್ಟೇ ನಾನು ಇಲಾಖೆಗೆ ಸೇರ್ಪಡೆಗೊಂಡಿದ್ದು, 2014ರಲ್ಲಿಯೇ ನಿವೇಶನಕ್ಕೆ ಸಂಬಂಧಿಸಿ ಆರ್‌ಟಿಸಿ ಇತ್ತು. ಅದೇ ಆರ್‌ಟಿಸಿ ಹಾಗೂ ಇಲಾಖೆಯ ಎಫ್‌ಎಂಬಿ ನಕ್ಷೆಯನ್ನು ಪಡೆದುಕೊಂಡು ಕಾನೂನು ಪ್ರಕಾರವಾಗಿಯೇ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಅಮಾನತು ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ, ಅಮಾನತಿಗೆ ಸೂಕ್ತ ಕಾರಣ ಏನೆಂದು ತಿಳಿದು ಬಂದಿಲ್ಲ".

- ನಿಝಾಮ್, ಅಮಾನತು ಆಗಿರುವ ಭೂ ಮಾಪನಾಧಿಕಾರಿ.

ಸರಕಾರಿ ಜಮೀನು ಅಳೆಯುವಾಗ ಎಡವಟ್ಟು : ಖಾಸಗಿಯವರ ಜಮೀನು ಅಳೆತೆ ಮಾಡುವಾಗ ಅಕ್ಕ ಪಕ್ಕದ ಜಮೀನು ಮಾಲಕರಿಗೆ ಕಂದಾಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗುತ್ತದೆ. ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಗಳನ್ನು ನೀಡಲಾಗುತ್ತದೆ. ವಿಶೇಷವೆಂದರೆ ಸರಕಾರಿ ಜಮೀನುಗಳನ್ನು ಸರ್ವೇ ಮಾಡುವಾಗ ಅಕ್ಕ ಪಕ್ಕದ ಜಮೀನಿನ ಮಾಲಕರಿಗೆ ಯಾವುದೇ ನೋಟಿಸ್ ಜಾರಿ ಮಾಡಲಾಗುವುದಿಲ್ಲ. ಹಾಗಾಗಿ ಸರಕಾರಿ ಜಮೀನುಗಳನ್ನು ಸರ್ವೇ ಮಾಡುವಾಗ ಎಡವಟ್ಟುಗಳು ಸಂಭವಿಸುತ್ತಿರುತ್ತವೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭೂ ಮಾಪನಾಧಿಕಾರಿಯ ಅಮಾನತು ವಿವಾದಕ್ಕೆ ಪರಿಹಾರವಲ್ಲ: ಹೋರಾಟ ಸಮಿತಿ

ಜನತಾ ಕಾಲನಿ ಸರಕಾರಿ ಶಾಲೆಯ ಭೂ ವಿವಾದದಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ರಕ್ಷಿಸುವ ಹುನ್ನಾರದ ಭಾಗವಾಗಿ ಬಡಪಾಯಿ ಸರ್ವೇಯರ್ ಅನ್ನು ಅಮಾನತು ಮಾಡಲಾಗಿದೆ. ಅವರ ಅಮಾನತು ಶಾಲೆಯ ಭೂ ವಿವಾದಕ್ಕೆ ಪರಿಹಾರವಲ್ಲ. ಇದರ ಹಿಂದೆ ಹಲವು ಹಿರಿಯ ಅಧಿಕಾರಿಗಳು ಕೈಯಾಡಿಸಿರುವ ಸಂಶಯವಿದೆ. ಹಾಗಾಗಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹೋರಾಟ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಅಮಾನತು ಆಗಿರುವ ನಿಝಾಮ್ ಅವರು ಸರ್ವೆ ಮಾಡುವ ಮುನ್ನ ಅಂದರೆ 2014ರಲ್ಲಿಯೇ ಸದ್ಯ ವಿವಾದದಲ್ಲಿರುವ ಸರಕಾರಿ ಶಾಲೆ ಮತ್ತು ಆಟದ ಮೈದಾನದ ಭೂಮಿಯ ಆರ್‌ಟಿಸಿ ಮಾಡಿಸಲಾಗಿತ್ತು. ಅವರು ಅದೇ ಆರ್‌ಟಿಸಿ ಸರ್ವೇ ನಂಬರ್ ಮತ್ತು ನಕ್ಷೆಯನ್ನು ಆಧರಿಸಿ ಸರ್ವೇ ಮಾಡಿದ್ದಾರೆ ಎಂದು ಹೋರಾಟ ಸಮಿತಿ ಹೇಳಿದೆ.

ಈ ಪ್ರಕರಣದಲ್ಲಿ ಆರ್‌ಟಿಸಿ ತಯಾರಿಸಲು ಸಹಕರಿಸಿದ್ದ ಅಂದಿನ ಕಂದಾಯ ಅಧಿಕಾರಿಗಳು ಮತ್ತು ತಹಶೀಲ್ದಾರ್‌ಗಳ ಲೋಪಗಳು ಎದ್ದು ಕಾಣುತ್ತಿದೆ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಹಿರಿಯ ತಲೆಗಳನ್ನು ರಕ್ಷಿಸುವ ಹುನ್ನಾರದ ಭಾಗವಾಗಿ ಬಡಪಾಯಿ ಸರ್ವೇಯರ್ ಅನ್ನು ಅಮಾನತು ಮಾಡುವ ಮೂಲಕ ಜಿಲ್ಲಾಡಳಿತ ಹೋರಾಟದ ಬಿಸಿ ತಣಿಸುವ ಪ್ರಯತ್ನ ಮಾಡಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News