ಬಿಲ್ಲವರ ಸಾಮಾಜಿಕ ಸಾಮರಸ್ಯ ಕೆಡಿಸುವ ಹುನ್ನಾರ: ದಿನೇಶ್ ಅಮೀನ್ ಮಟ್ಟು

Update: 2023-08-28 03:45 GMT

ಮಂಗಳೂರು, ಆ.27: ಬಿಲ್ಲವರ ಸಾಮಾಜಿಕ ಸಾಮರಸ್ಯ ಕೆಡಿಸುವ ಹುನ್ನಾರ ನಡೆಯುತ್ತಿದೆ. ಬಿಲ್ಲವರನ್ನು ರಾಜಕೀಯ ದಾಳಗಳಾಗಿ ಬಳಸುತ್ತಿದ್ದಾರೆ. ಸೂತ್ರಧಾರಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಬಿಲ್ಲವರಿಗೆ ಸಿಗಬೇಕಾದ ಸೂಕ್ತ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಕುದ್ರೋಳಿಯಲ್ಲಿಂದು ನಡೆದ ಮುಂಬೈಯ ಗುರುತು ಪ್ರಕಾಶನದ ವತಿಯಿಂದ ಪ್ರಕಟಿತಗೊಂಡ ಲೇಖಕ ಬಾಬು ಶಿವ ಪೂಜಾರಿಯವರ 'ಬಿಲ್ಲವರ ಗುತ್ತು ಬರ್ಕೆಗಳು' ಎಂಬ ಸಂಶೋಧನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಬಿಲ್ಲವರ ವೃತ್ತಿ ಮತ್ತು ಸಾಮಾಜಿಕ ಸ್ಥಾನಮಾನಗಳಿಗೂ ಸಂಬಂಧ ಇದೆ. ಬಿಲ್ಲವರು ಮೂಲತಃ ಯೋಧರಾಗಿ ಕೆಲಸ ಮಾಡಿದವರು. ಅದಕ್ಕಾಗಿ ಬಿಲ್ಲವರ ವೃತ್ತಿಯನ್ನು ನೆನಪಿಸಲು ಕೋಟಿ-ಚೆನ್ನಯರ ಹೆಸರಿನಲ್ಲಿ ಸೈನಿಕ ಶಾಲೆ ಸ್ಥಾಪನೆ ಯಾಗಬೇಕಾಗಿದೆ. ಜೊತೆಗೆ ಬಿಲ್ಲವರು ಬೇಸಾಯಗಾರರು, ವೈದ್ಯರು ಎನ್ನುವುದನ್ನು ತಿಳಿಸಬೇಕಾಗಿದೆ. ಭೂ ಸುಧಾರಣೆಯ ಬಳಿಕ ಬಿಲ್ಲವರು ಭೂಮಿ ಪಡೆದರು ಸಾಕಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಬಿಲ್ಲವರು ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಸ್ಥೆಗಳನ್ನು ಮುನ್ನಡೆಸಲು ಸಾಧ್ಯವಾಗದೆ ಇರಲು ಇದೂ ಒಂದು ಕಾರಣ ಎಂದು ಅಭಿಪ್ರಾಯಿಸಿದರು.

ನಾರಾಯಣ ಗುರುಗಳ ಸಾಮಾಜಿಕ ಚಳವಳಿಯ ನಂತರ ನಡೆದ ಚಳವಳಿಗಳು ವಿವಿಧ ಕ್ಷೇತ್ರಗಳಲ್ಲಿ ಪರಿಣಾಮ ಬೀರಿವೆ. ಕೇರಳದ ಇಳವರ ರಾಜಕೀಯ ಪ್ರಾಬಲ್ಯಕ್ಕೆ ಈ ಚಳವಳಿ ಕಾರಣ ಎಂದರು.

ಮಾಜಿ ಕೇಂದ್ರ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಕೃತಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ  ವಹಿಸಿದ್ದ ಸಾಹಿತಿ ಬಿ.ಎಂ.ರೋಹಿಣಿ  ಮಾತನಾಡಿ, ಬಿಲ್ಲವ ಗುತ್ತು ಮನೆತನದ ಹಿಂದೆ ಮಹಿಳೆಯರ ಪಾತ್ರ ದೊಡ್ಡದಿದೆ. ಮೊತ್ತ ಮೊದಲು ಬಿಲ್ಲವರು ಮಹಿಳೆಯರು ಶಿಕ್ಷಣಕ್ಕೆ ತೆರೆದು ಕೊಂಡರು. ಸಾಕಷ್ಟು ಸೂಲಗಿತ್ತಿಯರಾಗಿ ಬಿಲ್ಲವ ಮಹಿಳೆಯರು ಕಾರ್ಯ ನಿರ್ವಹಿಸಿದ್ದಾರೆ. ಬಿಲ್ಲವ ಮಹಿಳೆಯರು ಯುದ್ಧದಲ್ಲಿ, ದೈವದ ಪಾತ್ರಿಯಾಗಿ ಕಾರ್ಯ ನಿರ್ವಹಿಸಿದ ಉದಾಹರಣೆ ಇದೆ. ನಮ್ಮ ಸಮಾಜದ ದಾಖಲೆ ನಾವೇ ಮಾಡಬೇಕು. ಬಾಬು ಶಿವ ಪೂಜಾರಿಯವರ ಈ ಅಧ್ಯಯನ ಯುವ ಸಮಾಜ ಮುಂದುವರಿಸಬೇಕು ಎಂದರು.

ವಿಧಾನ ಪರಿಷತ್  ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಲ್ಲವರ ಸಮಾಜದ ಗತಕಾಲದ ಹಿರಿಮೆಯನ್ನು ಕೃತಿ ತಿಳಿಸುತ್ತದೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪನೆಗೊಂಡ ಬ್ರಹ್ಮಶ್ರೀ  ನಾರಾಯಣ ಗುರುಗಳ ಅಧ್ಯಯನ ಪೀಠದ ಮೂಲಕ  ಪ್ರಕಟಗೊಳ್ಳದೆ ಇರುವ ಬಾಬು ಶಿವ ಪೂಜಾರಿಯವರ ಕೃತಿಗಳ ಪ್ರಕಟನೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾ ಸಂಸ್ಥಾನ ಬಲ್ಯೋಟ್ಟು ರೇಣುಕಾ ಪೀಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಲೇಖಕ ಬಾಬು ಪೂಜಾರಿ ಬಿಲ್ಲವರ ಗುತ್ತು ಬರ್ಕೆ ಮನೆಗಳ ಸಂಶೋಧನಾ ಗ್ರಂಥದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಬರ್ಕೆ  ಮನೆಗಳು ನಮ್ಮ ಸಮಾಜದ ಗೌರವದ ಸಂಕೇತ ಅವುಗಳ ಬಗ್ಗೆ ಇನ್ನಷ್ಟು ಸಂಶೋಧನೆಯಾಗಬೇಕಾಗಿದೆ. ವಿಜಯನಗರದ ತುಳು ಅರಸ ಕೃಷ್ಣ ದೇವರಾಯರಿಗೂ ಬಿಲ್ಲವರಿಗೂ ಸಾಮ್ಯತೆ ಇದೆ. ಅಲೂಪರಿಗೂ ಬಿಲ್ಲವರಿಗೂ ಸಾಮ್ಯತೆ ಇದೆ. ಬಿಲ್ಲವರು ಆಡಳಿತ ನಡೆಸಿದ್ದಾರೆ. ಬಿಲ್ಲ ವರ ಕುಲಕಸುಬು ಮೂರ್ತೆದಾರಿಕೆಯಲ್ಲ, ಬೇಸಾಯ. ಮೂರ್ತೆದಾರಿಕೆ ಉಪಕಸುಬು. ಈ ಬಗ್ಗೆ ಕೃತಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ ಚಂದ್ರ ಡಿ. ಸುವರ್ಣ, ವೇದಕುಮಾರ್, ಇಂದುಮತಿ, ಊರ್ಮಿಳಾ ರಮೇಶ್, ಡಾ.ಗಣೇಶ್ ಅಮೀನ್ ಸಂಕಮಾರ್, ರಮಾನಾಥ ಕೊಟ್ಯಾನ್, ಗೋಪಾಲ ಬಂಗೇರ, ಪಿತಾಂಬರ ಹೇರಾಜೆ, ಬಿ.ಎನ್.ಶಂಕರ ಪೂಜಾರಿ, ಪದ್ಮರಾಜ್, ಶಶಿಧರ ಕೋಟ್ಯಾನ್, ರಾಜೇಶ್ ಬಿ., ಬೇಬಿ ಪೂಜಾರಿ, ಚಿತ್ತರಂಜನ್ ಬೋಳಾರ್, ಸಂಕೇತ ಪೂಜಾರಿ, ವೆಂಕಪ್ಪ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.

  ಮಾಜಿ ಸಚಿವ ವಿನಯ ಕುಮಾರ ಸೊರಕೆ, ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಮ ‍ಮಾತನಾಡಿ ಶುಭ ಹಾರೈಸಿದರು.

ಮುದ್ದು ಮೂಡುಬೆಳ್ಳೆ ಸ್ವಾಗತಿಸಿದರು. ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಶೈಲು ಬಿರ್ವ ವಂದಿಸಿದರು. 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News