ವಿಟ್ಲ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ; ಮೂವರು ಸಂಘಪರಿವಾರದ ಕಾರ್ಯಕರ್ತರ ಬಂಧನ
ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಸಂಘಪರಿವಾರದ ಕಾರ್ಯಕರ್ತರನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದರೆ ಮೂಲದ ಪ್ರಸ್ತುತ ಬೆರಿಪದವಿ ನಿವಾಸಿ ಅಕ್ಷಯ್ ದೇವಾಡಿಗ (24), ಬಾಯಾರು ಗ್ರಾಮದ ಕೊಜಪ್ಪ ನಿವಾಸಿ ಕಮಲಾಕ್ಷ ಬೆಳ್ಚಾಡ (30), ಬೆರಿಪದವು ನಿವಾಸಿ ಸುಕುಮಾರ ಬೆಳ್ಚಾಡ (28) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಷಯ್ ಬೆರಿಪದವಿನಲ್ಲಿ ಅಣ್ಣನ ಮನೆಯಲ್ಲಿದ್ದುಕೊಂಡು ಪೈಟಿಂಗ್ ಕೆಲಸ ನಿರ್ವಹಿಸುತ್ತಿದ್ದರೆ, ಕಮಲಾಕ್ಷ ಗಾರೆ ಕೆಲಸ ಹಾಗೂ ಸುಕುಮಾರ ಚಾಲಕ ವೃತ್ತಿಯನ್ನು ನಡೆಸಿಕೊಂಡಿದ್ದರು. ಬಂಧಿತರು ಸಂಘಪರಿವಾರದ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಟ್ಲ ಠಾಣೆಯಲ್ಲಿ ಪೊಕ್ಸೋ ಹಾಗೂ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಬಾಲಕಿ ನೀಡಿದ ಮಾಹಿತಿಯಂತೆ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯನ್ನು 2019ನೇ ಇಸವಿಯಲ್ಲಿ ಆಕೆಯ ಸಂಬಂಧಿಕರ ಮನೆಯಲ್ಲಿ ಜಯಪ್ರಕಾಶ್ ಎಂಬಾತ ಅತ್ಯಾಚಾರ ನಡೆಸಿದ್ದಾನೆ. ಕಳೆದ ಜನವರಿಯಲ್ಲಿ ಅಚ್ಚು ಯಾನೆ ಅಕ್ಷಯ್ ಎಂಬಾತ ಬೆರಿಪದವು ಶಾಲೆಯ ಬಳಿಗೆ ಬಂದು ಬೇರೆ ಬೇರೆ ದಿನಗಳಲ್ಲಿ 3 ಬಾರಿ ಅತ್ಯಾಚಾರ ನಡೆಸಿದ್ದಾನೆ. ಕಳೆದ ಮೇ ತಿಂಗಳಿನಲ್ಲಿ ಬೆರಿಪದವು ರಾಜ ಎಂಬಾತ ಬಾಲಕಿಗೆ ಕರೆ ಮಾಡಿ ಮಾತನಾಡಿಕೊಂಡಿದ್ದು, ಬೆರಿಪದವು ವಿದ್ಯಾರಣ್ಯ ಶಾಲೆಯ ಗುಡ್ಡ ಜಾಗಕ್ಕೆ ಬರಲು ಹೇಳಿ, ಬಾಲಕಿಯನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿರುತ್ತಾನೆ. ಕಳೆದ ಜೂನ್ ತಿಂಗಳಿನ ಮೊದಲ ವಾರದಲ್ಲಿ ಅಚ್ಚು ಯಾನೆ ಅಕ್ಷಯ್ ಎಂಬಾತನ ಮುಖಾಂತರ ಸುಕುಮಾರ ಪರಿಚಯಿಸಿಕೊಂಡು ಮುದುವೆಯಾಗುತ್ತೇನೆಂದು ಬೆರಿಪದವು ಎಂಬಲ್ಲಿಗೆ ಬರಲು ಹೇಳಿ ಅಲ್ಲಿನ ವಿದ್ಯಾರಣ್ಯ ಶಾಲೆಯ ಗುಡ್ಡ ಜಾಗದಲ್ಲಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿರುತ್ತಾನೆ. ಅಲ್ಲದೆ ದಿನಾಂಕ 28.07.2023 ರಂದು ರಾತ್ರಿ ವೇಳೆ ಕಮಾಲಾಕ್ಷ ಬೆಳ್ಚಡನು ಮದುವೆಯಾಗು ತ್ತೇನೆಂದು ಭರವಸೆ ನೀಡಿ, ಆತನ ಮನೆಯಾದ ಬಾಯಾರು ಗ್ರಾಮದಲ್ಲಿರುವ ಅವರ ಸಂಬಂಧಿಯವರ ಖಾಲಿ ಮನೆಗೆ ಬರಲು ಹೇಳಿ ಬಾಲಕಿಯು ಹೋದಾಗ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿರುತ್ತಾನೆ. ಈ ಎಲ್ಲ ಘಟನೆಗಳನ್ನು ಬಾಲಕಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ಅದರಂತೆ ಪೋಸ್ಕೋ, ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.