ಸುರತ್ಕಲ್‌ನಲ್ಲಿ ರಸ್ತೆ ಬಂದ್‌ ಮಾಡಿ ಫುಡ್‌ ಫೆಸ್ಟ್‌ | ಆಯೋಜಕರ ವಿರುದ್ಧ ಕ್ರಮವೇನು? : ಸಾರ್ವಜನಿಕರ ಪ್ರಶ್ನೆ

Update: 2024-11-06 16:32 GMT

ಸುರತ್ಕಲ್ :‌ ಫೆಲೆಸ್ತೀನ್‌ ಮೇಲಿನ ಇಸ್ರೇಲ್‌ ಆಕ್ರಮಣ ವಿರೋಧಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅದರ ಬೆನ್ನಿಗೆ ಸುರತ್ಕಲ್‌ ನಲ್ಲಿ ರಸ್ತೆ ಬಂದ್‌ ಮಾಡಿ ನಡೆಸಿದ ಫುಡ್ ಫೆಸ್ಟ್‌ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಯಾವುದೇ ಅನುಮತಿ ಪಡೆಯದೇ ಸುರತ್ಕಲ್‌ ಪೇಟೆಯ ಕಾನ- ಕೃಷ್ಣಾಪುರ- ಮಂಗಳೂರು ಮುಖ್ಯ ರಸ್ತೆಯ ಒಂದು ಪಾರ್ಶ್ವವನ್ನು ಬಂದ್‌ ಮಾಡಿ ಖಾಸಗಿ ಪ್ರತಿಷ್ಠಾನವೊಂದು ರಸ್ತೆಯಲ್ಲೇ ಫುಡ್‌ ಫೆಸ್ಟ್‌ ಮತ್ತು ಸಂಗೀತ ರಸಮಂಜರಿ ಆಯೋಜಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್‌ ಶೆಟ್ಟಿ ನೇತೃತ್ವದಲ್ಲಿ ಸುರತ್ಕಲ್‌ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭರತ್‌ ರಾಜ್‌ ಕೃಷ್ಣಾಪುರ ಅವರ ಕರಾವಳಿ ಸೇವಾ ಪ್ರತಿಷ್ಠಾನದ ವತಿಯಿಂದ ನ.2 ಮತ್ತು 3ರಂದು ಸುರತ್ಕಲ್‌ ಪೇಟೆಯಲ್ಲಿ ಫುಡ್‌ ಫೆಸ್ಟ್‌ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

"ಈ ಕಾರ್ಯಕ್ರಮಕ್ಕೆ ಅನುಮತಿ ಕೇಳಿ ಸಂಘಟಕರು ಸುರತ್ಕಲ್‌ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಮೇಲಾಧಿಕಾರಿಗಳಿಗೆ ರವಾನಿಸಲಾಗಿದ್ದು, ಸುರತ್ಕಲ್‌ ಪೊಲೀಸ್‌ ಠಾಣೆಯಿಂದ ಅನುಮತಿ ನೀಡಲಾಗಿಲ್ಲ”, ಎಂದು ಸುರತ್ಕಲ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ʼವಾರ್ತಾಭಾರತಿʼಗೆ ಮಾಹಿತಿ ನೀಡಿದ್ದರು.

ಆದರೆ, ಕಾರ್ಯಕ್ರಮ ಮುಗಿದು ಮೂರು ದಿನಗಳು ಕಳೆದಿದ್ದರೂ, ಯಾವುದೇ ಇಲಾಖೆಗಳಿಂದ ಪೂರ್ವಾನುಮತಿ ಪಡೆದು ಕೊಳ್ಳದೆ ಕಾರ್ಯಕ್ರಮ ಆಯೋಜಿಸಿರುವವರ ವಿರುದ್ಧ ಪೊಲೀಸ್‌ ಇಲಾಖೆ ಇದುವರೆಗೂ ಯಾವುದೇ ಪ್ರಕರಣ ದಾಖಲಿಸಿ ಕೊಂಡಿಲ್ಲ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆಯೇ ಎಂಬ ಕುರಿತಾಗಿ ಮಾಹಿತಿ ಪಡೆದುಕೊಳ್ಳಲು ʼವಾರ್ತಾಭಾರತಿʼ ಸುರತ್ಕಲ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಮಹೇಶ್‌ ಪ್ರಸಾದ್‌ ಅವರನ್ನು ಬುಧವಾರ ದೂರವಾಣಿ ಮೂಲಕ ಸಂಪರ್ಕಿಸಿದ್ದು, "ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಳಿಕ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ್‌ ಗೋಯಲ್‌ ಅವರನ್ನೂ ದೂರವಾಣಿ ಮೂಲಕ ಸಂಪರ್ಕಿಸಿದ್ದು "ಘಟನೆಗೆ ಸಂಬಂಧಿಸಿ ತಮ್ಮ ಕಚೇರಿಗೆ ಬಂದರೆ ದಾಖಲೆಗಳನ್ನು ನೀಡಲಾಗುವುದು" ಎಂದು ಉತ್ತರಿಸಿ ಅವರು ಕರೆ ಕಟ್‌ ಮಾಡಿದ್ದಾರೆ.

ನಗರದ ಕ್ಲಾಕ್ ಟವರ್ ಬಳಿ ಸೋಮವಾರ ಫೆಲೆಸ್ತೀನ್ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ಸಿಪಿಎಂ-ಸಿಪಿಐ ಮತ್ತು ಸಮಾನ ಮನಸ್ಕ ಸಂಘಟನೆಗಳ ಸದಸ್ಯರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ ಪ್ರವೀಣ್‌ ಕೆ ಅವರು, "ಪ್ರತಿಭಟನೆಗೆ ಅನುಮತಿ ಇಲ್ಲದಿದ್ದರೂ, ಗುಂಪು ಕಟ್ಟಿ ಕೊಂಡು ಪ್ರತಿಭಟನೆ ನಡೆಸಲಾಗಿದೆ" ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಯ ಬಳಿಕ ಸುರತ್ಕಲ್‌ ರಸ್ತೆಯನ್ನು ಬಂದ್‌ ಮಾಡಿ ಮಂಗಳೂರು ಉತ್ತರ ಶಾಸಕರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭರತ್‌ ರಾಜ್‌ ಕೃಷ್ಣಾಪುರ ಅವರ ಕರಾವಳಿ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಫುಡ್‌ ಫೆಸ್ಟ್‌ ಮತ್ತು ಸಂಗೀತ ರಸಮಂಜರಿ, ಡಿಜೆ ಕಾರ್ಯಕ್ರಮ ಮತ್ತೆ ಮುನ್ನೆಲೆಗೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News