ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ವಿರೋಧಿ ಅಲೆ ಎದ್ದಿದೆ : ಸಿಎಂ ಸಿದ್ದರಾಮಯ್ಯ
ಹರಿಹರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿ ವಿರೋಧಿ ಅಲೆ ಜೋರಾಗಿದ ಎನ್ನುವುದನ್ನು ಸ್ವತಃ ಬಿಜೆಪಿಯವರೇ ಗುರುತಿಸಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ ಹಾಗೂ ಬಿಜೆಪಿಗೆ ಸೋಲು ಖಂಡಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
ಇಂದು ದಾವಣಗೆರೆ ಲೋಕಸಭಾ ಚುನಾವಣೆಯ ಪ್ರಜಾಧ್ವನಿ-02 ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು.
ಬಿಜೆಪಿಯ 25 ಸಂಸದರು ರಾಜ್ಯಕ್ಕಾಗಿರುವ ಅನ್ಯಾಯವನ್ನು ಎಂದೂ ಪ್ರಶ್ನಿಸಲಿಲ್ಲ. ಅವರಲ್ಲಿ ಹಲವರನ್ನು ಈ ಬಾರಿ ಬಿಜೆಪಿಯವರೇ ಕೈಬಿಟ್ಟಿದ್ದಾರೆ. ಈ ಹಿಂದೆ ಇದ್ದ ಬಿಜೆಪಿ ಸಂಸದರು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದೇ , ಬಿಜೆಪಿಯವರೇ ಈ ಬಾರಿ ಹಲವರನ್ನು ಕೈಬಿಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ
ಹರಿಹರ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುವ ಏತ ನೀರಾವರಿ ಯೋಜನೆಗೆ ಚುನಾವಣೆ ನಂತರ ಚಾಲನೆ ನೀಡಲಾಗುವುದು. ನಾನು ನುಡಿದ ಮಾತಿನಂತೆ ನಡೆಯುವವನು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆಂದು ತಿಳಿಸಿದಂತೆ 8 ತಿಂಗಳ ಒಳಗೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ,ಯುವನಿಧಿ ಹಾಗೂ ಶಕ್ತಿ ಯೋಜನೆಗಳು ಜನರ ಪ್ರಶಂಸೆಯನ್ನು ಗಳಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ರೈತ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ಶಾದಿ ಭಾಗ್ಯಗಳಂತಹ ಜನಪರ ಯೋಜನೆಗಳನ್ನು ಕಾಂಗ್ರೆಸ್ ನೀಡಿದೆ ಎಂದರು.
ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ
ಬಿಜೆಪಿ ಜಾತಿ ಧರ್ಮಗಳನ್ನು ಪರಸ್ಪರ ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ದ್ವೇಷದ ರಾಜಕಾರಣವನ್ನು ಮಾಡುತ್ತಾ ಜನರ ಒಳಿತನ್ನು ಕಡೆಗಣಿಸಿದ್ದಾರೆ. ಮೋದಿಯವರು , ದಲಿತರ, ಹಿಂದುಳಿದವರ ಮೀಸಲಾತಿಯನ್ನು ಮುಸಲ್ಮಾನರಿಗೆ ಕಾಂಗ್ರೆಸ್ ನೀಡುತ್ತದೆ ಎಂದು ದೊಡ್ಡ ಸುಳ್ಳನ್ನು ಹೇಳಿದ್ದಾರೆ. ಈ ಪ್ರಮಾಣದಲ್ಲಿ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ ಎಂದರು.
ಮೀಸಲಾತಿ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ
ಬಿಜೆಪಿ ಹಾಗೂ ಆರೆಸ್ಸೆಸ್ ಮೀಸಲಾತಿಯನ್ನು ಬೆಂಬಲಿಸಲಿಲ್ಲ. ಆದ್ದರಿಂದ ಮೀಸಲಾತಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಮಂಡಲ್ ವರದಿಯಂತೆ ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಮೀಸಲಾತಿ ತರಲು ಬಿಜೆಪಿ ವಿರೋಧಿಸಿದರು. ಮಂಡಲ ಪಂಚಾಯತಿ, ನಗರ ಸಭೆಗಳಲ್ಲಿ ಮಹಿಳೆಯರು, ದಲಿತರು, ಹಿಂದುಳಿದವರಿಗೆ ಮೀಸಲಾತಿ ನೀಡುವುದನ್ನು ಬಿಜೆಪಿ ವಿರೋಧಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಮೀಸಲಾತಿ ನೀಡುವಿಕೆಯನ್ನು ಎತ್ತಿಹಿಡಿಯಿತು. ಚುನಾವಣೆ ಬಂದಾಗ ಮಾತ್ರ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ ಎಂದು ಟೀಕಿಸಿದರು.
ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ
ನಮ್ಮ ಸರ್ಕಾರ ಇರುವವರೆಗೆ ಜನತೆಯ ಆಶೋತ್ತರಗಳನ್ನು ಈಡೇರಿಸಲಾಗುವುದು. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ. ನಮಗೆ ತೊಂದರೆ ಕೊಡಲು ವಿನಯ್ ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದಾರೆ. ಅವರು ಗೆಲ್ಲುವುದಿಲ್ಲ. ಏಕೆಂದರೆ ಅವರು ಬಿಜೆಪಿ ಜೊತೆಗೆ ಶಾಮೀಲಾಗಿದ್ದಾರೆ. ಕನಕ ಗುರುಪೀಠದ ನಿರಂಜನಾನಂದಾಪುರಿ ಸ್ವಾಮಿಗಳು ಮತ್ತು ನಾನು ವಿನಯ್ ಕುಮಾರ್ ಅವರೊಂದಿಗೆ ಮಾತನಾಡಿ, ನಿಲ್ಲುವುದು ಬೇಡ ಸಲಹೆ ನೀಡಿದಾಗ ಒಪ್ಪಿಕೊಂಡ ಅವರು. ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಾನು ಬೇಕೋ, ವಿನಯ್ ಕುಮಾರ್ ಬೇಕೋ ನಿರ್ಧರಿಸಿ ಎಂದರು.
ನಾನೇ ಚುನಾವಣೆಗೆ ನಿಂತಿದ್ದೇನೆ ಎಂದು ತಿಳಿಯಬೇಕು. ಕಾಂಗ್ರೆಸ್ ಅಭ್ಯರ್ಥಿಗೆ ಕೊಡುವ ಮತ ಸಿದ್ದರಾಮಯ್ಯಗೆ ಕೊಡುವ ಮತ. ನನಗೆ ಶಕ್ತಿ ನೀಡಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.