ಬೆಳಗಾವಿ ಅಧಿವೇಶನ: ನಾಡಿಗೆ ಬೆಳಕಾಗಲಿ

Update: 2023-11-24 03:55 GMT
Full View

ಬೆಳಗಾವಿಯಲ್ಲಿ ಅಧಿವೇಶನಕ್ಕೆ ಸಿದ್ಧತೆ ನಡೆಯುತ್ತಿರುವ ಹೊತ್ತಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಒಂದು ಮಹತ್ವದ ಮನವಿಯನ್ನು ಮಾಡಿದ್ದಾರೆ. ಸದನದ ಒಳಗಡೆ ಮತ್ತು ಹೊರಗಡೆ ಅನಗತ್ಯ ಪ್ರತಿಭಟನೆ, ಧರಣಿಗಳ ಸಂಖ್ಯೆ ತಗ್ಗಿದಾಗ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿ ಬಾರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಬೇರೆ ಬೇರೆ ಸಂಘಟನೆಗಳು ವಿಧಾನಸೌಧದ ಮುಂದೆ ನೆರೆಯುತ್ತವೆ. ಅಧಿವೇಶನ ಸಂದರ್ಭದಲ್ಲಿ ಕೃಷಿ, ಶಿಕ್ಷಣ, ಕಂದಾಯ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸುವುದು ಸಾಮಾನ್ಯವಾಗಿದೆ. ನಿರಂತರವಾಗಿ ಧರಣಿ, ಸತ್ಯಾಗ್ರಹ ಪ್ರತಿಭಟನೆ ನಡೆಯುವ ಮೂಲಕ ಇಡೀ ಅಧಿವೇಶನದ ಗಮನ ಬೇರೆಡೆಗೆ ತಿರುಗುತ್ತದೆ. ಅಧಿವೇಶನ ಎಂದರೆ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಿಗೆ ವೇದಿಕೆ ಕಲ್ಪಿಸುವ ಒಂದು ಸಂದರ್ಭ ಎನ್ನುವ ಅರ್ಥ ಬರುತ್ತಿದೆ. ಆದುದರಿಂದ ಅಧಿವೇಶನ ಆರಂಭಗೊಳ್ಳುವ ಮುಂಚೆಯೇ ಸಂಬಂಧಪಟ್ಟ ಸಂಘಟನೆಗಳ ಪ್ರಮುಖರ ಸಭೆ ಕರೆದು ಅವರ ಬೇಡಿಕೆ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಿ ಅವುಗಳ ಪರಿಹಾರಕ್ಕೆ ಪ್ರಯತ್ನಿಸಲು ಹೊರಟ್ಟಿ ಮನವಿ ಮಾಡಿದ್ದಾರೆ.

ಅವರ ಮನವಿ ಅರ್ಥಪೂರ್ಣ ಮಾತ್ರವಲ್ಲ, ಅಧಿವೇಶನದ ಯಶಸ್ಸಿಗೆ ಈ ಪ್ರಯತ್ನ ಪೂರಕವಾಗಿ ಕೆಲಸ ಮಾಡಬಹುದು. ಅಧಿವೇಶನಕ್ಕಾಗಿ ಸರಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಮಹತ್ತರ ಉದ್ದೇಶದಿಂದ ಬೆಳಗಾವಿಯಲ್ಲಿ ಅಧಿವೇಶನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಅಧಿವೇಶನ ತನ್ನ ಉದ್ದೇಶ ಸಾಧಿಸಿಕೊಳ್ಳದೇ ಇದ್ದರೆ ಅದರಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲಿದೆ ಮಾತ್ರವಲ್ಲ, ಸರಕಾರ ವೆಚ್ಚ ಮಾಡಿದ ಹಣವೂ ವ್ಯರ್ಥವಾಗಿ ಬಿಡುತ್ತದೆ. ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಧರಣಿಗಾಗಿಯೇ ಸುಮಾರು 80 ಸಾವಿರ ಜನರು ಸೇರ್ಪಡೆಗೊಳ್ಳುತ್ತಾರೆ ಎನ್ನುವ ವರದಿಗಳಿವೆ. 2022ರಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ 10 ದಿನಗಳಲ್ಲಿ 102ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿವೆ. ಇವರನ್ನು ನಿಯಂತ್ರಿಸುವುದಕ್ಕಾಗಿಯೇ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಹಾಕಬೇಕಾಗುತ್ತದೆ. ಹೆಚ್ಚಿನ ಭದ್ರತೆಗಳಿಗಾಗಿ ಹಣ ವೆಚ್ಚ ಮಾಡಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಹೊರಗಿನ ಗದ್ದಲಗಳು ಒಳಗಿನ ಕಲಾಪಗಳ ಮೇಲೆ ಪರಿಣಾಮ ಬೀರಿದ್ದೇ ಅಧಿಕ. ಅನೇಕ ಸಂದರ್ಭಗಳಲ್ಲಿ ಹೊರಗಿನ ಪ್ರತಿಭಟನೆಗಳ ಕಾವಿಗೆ ಹೆದರಿ ಕಲಾಪವನ್ನು ಸ್ಥಗಿತಗೊಳಿಸಬೇಕಾದ ಸಂದರ್ಭ ಬಂದಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ, ಅಧಿವೇಶನದಲ್ಲಿ ಭಾಗವಹಿಸಬೇಕಾದ ಶಾಸಕರೇ ಪ್ರತಿಭಟನಾ ನಿರತರೊಂದಿಗೆ ಕೈ ಜೋಡಿಸಿಕೊಳ್ಳುವುದಿದೆ. ಈ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗಳ ಸಂಖ್ಯೆಯನ್ನು ಇಳಿಮುಖ ಗೊಳಿಸುವ ಬಗ್ಗೆ ಕಾರ್ಯಕ್ರಮ ಹಾಕಿಕೊಂಡರೆ ಅದು ಸ್ವಾಗತಾರ್ಹವೇ ಸರಿ. ಆದರೆ ಈ ಸಂದರ್ಭದಲ್ಲಿ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವ ಕಾರಣಕ್ಕೂ ಪೊಲೀಸರ ಲಾಠಿ ಮೂಲಕ ಅಥವಾ ಜಿಲ್ಲಾಡಳಿತದ ಒತ್ತಡಗಳ ಮೂಲಕ ಈ ಪ್ರತಿಭಟನೆಗಳನ್ನು ದಮನಿಸುವ ಕೆಲಸ ಮಾತ್ರ ನಡೆಯಬಾರದು.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಇಷ್ಟು ಪ್ರಮಾಣದಲ್ಲಿ ಯಾಕೆ ಪ್ರತಿಭಟನೆಗಳು ನಡೆಯುತ್ತಿವೆ ಎನ್ನುವುದನ್ನು ಮೊದಲು ಸರಕಾರ ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕರ್ನಾಟಕದ ರಾಜಧಾನಿ ಕೆಲವು ದಿನಗಳ ಮಟ್ಟಿಗಾದರೂ ಉತ್ತರ ಕರ್ನಾಟಕಕ್ಕೆ ವರ್ಗಾವಣೆಯಾಗುತ್ತದೆ. ಉತ್ತರ ಕರ್ನಾಟಕದ ಜನರಿಗೆ ತಮ್ಮ ಬೇಡಿಕೆಗಳನ್ನು ಮುಂದಿಡಲು ಯಾವಾಗೆಂದಾಗ ಬೆಂಗಳೂರಿಗೆ ಬರುವುದಕ್ಕೆ ಸಾಧ್ಯವಿಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರು ಇಡೀ ಕರ್ನಾಟಕವನ್ನು ಪ್ರತಿನಿಧಿಸುವುದಕ್ಕೆ ವಿಫಲವಾಗಿದೆ ಎನ್ನುವ ಆರೋಪವನ್ನು ಉತ್ತರ ಕರ್ನಾಟಕದ ಜನರು ಹಿಂದಿನಿಂದ ಮಾಡುತ್ತಾ ಬಂದಿದ್ದಾರೆ. ಈ ಕಾರಣದಿಂದಲೇ, ಉತ್ತರ ಕರ್ನಾಟಕಕ್ಕಾಗಿ ಇನ್ನೊಂದು ಉಪ ರಾಜಧಾನಿಯನ್ನು ಘೋಷಿಸಬೇಕು ಎನ್ನುವ ಬೇಡಿಕೆಯನ್ನು ಈಗಾಗಲೇ ಹಲವರು ಇಟ್ಟಿದ್ದಾರೆ. ಉತ್ತರ ಕರ್ನಾಟಕದ ಜನರ ಮೇಲೆ ಬೆಂಗಳೂರು ತನ್ನ ಸರ್ವಾಧಿಕಾರವನ್ನು ಮೆರೆಯುತ್ತಿರುವ ಬಗ್ಗೆಯೂ ಆರೋಪಗಳಿವೆ. ದಕ್ಷಿಣ ಕರ್ನಾಟಕದ ಜನರಿಗೆ ಯಾವಾಗ ಬೇಕಾದರೂ ಬೆಂಗಳೂರಿಗೆ ತೆರಳಿ, ಅಲ್ಲಿರುವ ರಾಜಕೀಯ ನಾಯಕರ ಕಿವಿಗೆ ಅಪ್ಪಳಿಸುವಂತೆ ಪ್ರತಿಭಟನೆ ಕೂಗುವ ಅವಕಾಶಗಳಿವೆ. ಆದರೆ ಉತ್ತರ ಕರ್ನಾಟಕದ ಮಂದಿಗೆ ಇದು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಸಿಗುತ್ತದೆ. ಬೆಂಗಳೂರಿನಲ್ಲಿ ಇಡೀ ವರ್ಷ ನಡೆಯುವ ಪ್ರತಿಭಟನೆಗಳು, ಬೆಳಗಾವಿಯ ಅಧಿವೇಶನದ ಸಂದರ್ಭ ಹತ್ತು ದಿನಗಳಲ್ಲಿ ನಡೆಯುವುದು ಇದೇ ಕಾರಣಕ್ಕೆ. ಆದುದರಿಂದ ಅಧಿವೇಶನದಲ್ಲಿ ನಡೆಯುವ ಕಲಾಪದಷ್ಟೇ ಮುಖ್ಯ, ಅಧಿವೇಶನದ ಹೊರಗಡೆ ನಡೆಯುವ ಈ ಜನಸಂಘಟನೆಗಳ ಪ್ರತಿಭಟನೆಗಳು. ಇವುಗಳಿಗೂ ರಾಜಕಾರಣಿಗಳು ಕಿವಿಯಾಗುವ ಅಗತ್ಯವಿದೆ.

ಇದೇ ಸಂದರ್ಭದಲ್ಲಿ ಹೊರಟ್ಟಿ ಮಾಡಿರುವ ಆರೋಪ ಪೂರ್ಣ ಸತ್ಯವಲ್ಲ. ಹೊರಗೆ ನಡೆಯುವ ಪ್ರತಿಭಟನೆಗಳು ಕೆಲವೊಮ್ಮೆ ಒಳಗೆ ನಡೆಯುವ ಅಧಿವೇಶನಗಳಿಗೆ ಸರಿಯಾದ ದಿಕ್ಕನ್ನು ನೀಡುವ ಸಾಧ್ಯತೆಗಳಿವೆ. ಉತ್ತರ ಕರ್ನಾಟಕದ ನಿಜವಾದ ಸಮಸ್ಯೆಗಳನ್ನು ಎತ್ತಿ ಅದನ್ನು ಕಲಾಪದಲ್ಲಿ ಚರ್ಚಿಸುವುದಕ್ಕೆ ಈ ಪ್ರತಿಭಟನೆಗಳು ಒತ್ತಡಗಳನ್ನು ಹಾಕಬಹುದು. ಅಪರೂಪಕ್ಕೆ ಬೆಳಗಾವಿಗೆ ತೆರಳುವ ಬೆಂಗಳೂರಿನ ನಾಯಕರಿಗೆ ಈ ಪ್ರತಿಭಟನೆಗಳ ಮೂಲಕ ಉತ್ತರ ಕರ್ನಾಟಕದ ಜನರ ಸಮಸ್ಯೆಗಳು ಪರಿಚಯವಾಗಬಹುದು. ಹಾಗೆಯೇ ಕಲಾಪಗಳನ್ನು ಪೋಲು ಮಾಡುವಲ್ಲಿ ಜನಪ್ರತಿನಿಧಿಗಳ ಪಾತ್ರವೂ ಚರ್ಚೆಯಾಗಬೇಕಾಗಿದೆ. ನಾಡಿನ ಅಭಿವೃದ್ಧಿಗೆ ಸಂಬಂಧ ಪಟ್ಟ ವಿಷಯಗಳನ್ನು ಚರ್ಚಿಸದೇ, ಅನಗತ್ಯ ವಿವಾದಗಳನ್ನೇ ಮುಂದಿಟ್ಟುಕೊಂಡು ಕಲಾಪವನ್ನು ಕೆಡಿಸುವುದು, ಸಮಯ ಪೋಲು ಮಾಡುವುದು, ಸಭಾ ತ್ಯಾಗ ಮಾಡುವುದರಿಂದ ಆಗುವ ನಷ್ಟದ ಬಗ್ಗೆಯೂ ಹೊರಟ್ಟಿ ಅವರು ಗಂಭೀರವಾಗಿ ಯೋಚಿಸಬೇಕು. ಸರಿಯಾದ ಹೋಮ್‌ವರ್ಕ್‌ಗಳನ್ನು ಮಾಡಿಕೊಂಡು ಬರದ ವಿರೋಧ ಪಕ್ಷಗಳು ಸುಗಮವಾಗಿ ಅಧಿವೇಶನ ನಡೆಯದಂತೆ ನೋಡಿಕೊಳ್ಳುವುದೇ ತಮ್ಮ ಸಾಧನೆ ಎಂದು ತಿಳಿದುಕೊಂಡಿವೆ. ಬರೇ ಗದ್ದಲ, ದಾಂಧಲೆ, ಧರಣಿಯ ಮೂಲಕ, ಕಲಾಪ ಮುಂದೂಡುವಂತೆ ಮಾಡಿ ಮಾಧ್ಯಮಗಳಲ್ಲಿ ಮಿಂಚುವ ಸುಲಭ ದಾರಿಯನ್ನು ಅವರು ಕಂಡುಕೊಂಡಿದ್ದಾರೆ. ಈ ಮೂಲಕ ಸುದ್ದಿಯಾಗುವ ಚಾಳಿ ಜನಪ್ರತಿನಿಧಿಗಳಲ್ಲಿ ಹೆಚ್ಚಿದೆ. ಹಿಂದೆಲ್ಲ, ಒಂದು ಅಧಿವೇಶನ ನಡೆಯುವ ಸಂದರ್ಭದಲ್ಲಿ ಜನನಾಯಕರೆಂದು ಕರೆದುಕೊಂಡವರು ಪೂರ್ವತಯಾರಿ ಮಾಡಿಕೊಂಡು ಬರುತ್ತಿದ್ದರು. ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಿದ್ದರು. ಅಂತಹ ಮುತ್ಸದ್ದಿ ಜನಪ್ರತಿನಿಧಿಗಳ ಕೊರತೆ ಅಧಿವೇಶನದ ಸಂದರ್ಭದಲ್ಲಿ ಎದ್ದು ಕಾಣುತ್ತಿದೆ.

ಆದುದರಿಂದ, ಯಾವುದೇ ಅಧಿವೇಶನ ನಡೆಯುವ ಮುನ್ನ ವಿರೋಧ ಪಕ್ಷಗಳು ಯಾವ ವಿಷಯವನ್ನು ಎತ್ತಬೇಕು ಎನ್ನುವುದನ್ನು ಪೂರ್ವಭಾವಿ ಸಭೆ ನಡೆಸಿ ಚರ್ಚಿಸಬೇಕು. ತಾವು ಪ್ರಸ್ತಾಪಿಸಲಿರುವ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ, ಅಂಕಿಅಂಶಗಳನ್ನು ಸಂಗ್ರಹಿಸಿ ಸರಕಾರದ ವೈಫಲ್ಯಗಳನ್ನು, ಅಕ್ರಮಗಳನ್ನ್ನು ಬಯಲಿಗೆಳೆಯಬೇಕು. ಅಸ್ತಿತ್ವದಲ್ಲೇ ಇಲ್ಲದ ‘ಪೆನ್‌ಡ್ರೈವ್’ಗಳನ್ನು ಮುಂದಿಟ್ಟುಕೊಂಡು ಗದ್ದಲ ಎಬ್ಬಿಸಿ ಸದನ ಕಲಾಪಗಳನ್ನು ವ್ಯರ್ಥ ಮಾಡುವ ನಾಯಕರಿಗೆ ಸಭಾಪತಿಗಳು ಬುದ್ಧ್ದ್ದಿ ಹೇಳಿ ಅವರನ್ನು ತಿದ್ದಿ ತೀಡುವ ಕೆಲಸವನ್ನು ಮಾಡಬೇಕು. ಆಗ ಬೆಳಗಾವಿ ಎಂದಲ್ಲ ಯಾವುದೇ ಅಧಿವೇಶನ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳಲು ಯಶಸ್ವಿಯಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News