ಒಂದು ತಿಂಗಳು ಆಹಾರದಿಂದ ಗೋದಿಯನ್ನು ಹೊರಗಿಟ್ಟರೆ ದೇಹದಲ್ಲಾಗುವ ಬದಲಾವಣೆಗಳೇನು?

Update: 2023-08-04 17:29 GMT

ಸಾಂದರ್ಭಿಕ ಚಿತ್ರ. | Photo: NDTV 

ಗೋಧಿ ಹಾಗೂ ಕಾಳು ಆಧರಿತ ಆಹಾರ ಎಲ್ಲೆಡೆ ನಮ್ಮ ಆಹಾರಕ್ರಮದ ಭಾಗವಾಗಿದೆ. ಬ್ರೆಡ್, ಪಾಸ್ತಾ, ಬಗೆಲ್ ಹಾಗೂ ಧಾನ್ಯದ ಉಪಾಹಾರಗಳು ನಮಗೆ ಅಚ್ಚುಮೆಚ್ಚು. ಅದೆಷ್ಟೋ ಮಂದಿಗೆ ತಮ್ಮ ಆಹಾರಕ್ರಮದಿಂದ ಇದನ್ನು ತ್ಯಜಿಸುವುದು ಅಸಾಧ್ಯ ಎನಿಸಿಬಿಟ್ಟಿದೆ. ಆದರೆ ಗೋಧಿ ಮುಕ್ತ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹಲವು ಮಂದಿಗೆ ಗೋಧಿ ಬಳಕೆ ಗ್ಲೂಟೆನ್ ಸೆನ್ಸಿಟಿವಿಟಿ, ತೂಕ ಹೆಚ್ಚಳ, ಅಧಿಕ ರಕ್ತದ ಒತ್ತಡ ಮತ್ತು ಸ್ವಯಂಪ್ರತಿರೋಧ ಸ್ಥಿತಿಯಂಥ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇಂಥ ಸಂದರ್ಭಗಳಲ್ಲಿ ನಮ್ಮ ಆಹಾರಕ್ರಮದಿಂದ ಗೋಧಿಯನ್ನು ಸಂಪೂರ್ಣ ತ್ಯಜಿಸಬಹುದೇ? ಒಂದು ತಿಂಗಳ ವರೆಗೆ ಗೋಧಿ ಸೇವಿಸದೇ ಇದ್ದರೆ ನಮ್ಮ ದೇಹಕ್ಕೆ ಏನಾಗುತ್ತದೆ? ಈ ಪ್ರಶ್ನೆಗಳಿಗೆ ತಜ್ಞರು ನೀಡುವ ಉತ್ತರ ಹೀಗಿದೆ:

"ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಆಹಾರವನ್ನು ಕಡಿತಗೊಳಿಸಿ ಪರ್ಯಾಯ ಆಹಾರಕ್ರಮ ಅಳವಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಉದಾಹರಣೆಗೆ ಒಂದು ತಿಂಗಳ ಕಾಲ ಗೋಧಿ ತ್ಯಜಿಸುವುದು ಒಂದು ಪ್ರಯೋಗ. ಇದು ನಮ್ಮ ದೇಹದ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಳ್ಳುವುದು ಅಗತ್ಯ ಹಾಗೂ ಅದರ ಗುಣಾವಗುಣಗಳನ್ನೂ ವಿಶ್ಲೇಷಿಸಬೇಕಾಗುತ್ತದೆ" ಎಂದು ಕಮಿನೇನಿ ಆಸ್ಪತ್ರೆಯ ಹಿರಿಯ ಆಹಾರತಜ್ಞೆ ಲಕ್ಷ್ಮಿ ಹೇಳುತ್ತಾರೆ.

ಗೋಧಿಮುಕ್ತ ಆಹಾರ ಕ್ರಮ ರೂಢಿಸಿಕೊಳ್ಳುವುದರಿಂದ ರಕ್ತದ ಗ್ಲೂಕೋಸ್ ಮಟ್ಟ ಸ್ಥಿರಗೊಳ್ಳುತ್ತದೆ. ಜತೆಗೆ ಜೀರ್ಣಕ್ರಿಯೆ ಸುಧಾರಿಸಿ, ತೂಕ ಇಳಿಕೆ, ಸೆಲಾಯಿಕ್ ಕಾಯಿಲೆ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಆದರೆ ಗೋಧಿಯನ್ನು ಆಹಾರದಿಂದ ತ್ಯಜಿಸಬೇಕೇ ಅಥವಾ ಬೇಡವೇ ಎನ್ನುವುದನ್ನು ಹಲವು ಅಂಶಗಳು ನಿರ್ಧರಿಸುತ್ತವೆ ಎನ್ನುವುದು ಅವರ ಅನಿಸಿಕೆ. ಸೆಲಾಯಿಕ್ ಕಾಯಿಲೆ ಅಥವಾ ಗ್ಲೂಟೆನ್ ಸೆನ್ಸಿಟಿವಿಟಿ ಹೊಂದಿರುವವರು ಗೋಧಿ ತ್ಯಜಿಸಿದರೆ ಪರಿಣಾಮಕಾರಿಯಾಗಿ ಕಾಯಿಲೆ ನಿರ್ವಹಣೆ ಸಾಧ್ಯ. ಇಂಥ ನಿರ್ಧಾರ ಕೈಗೊಳ್ಳುವ ಮೊದಲು ವೈದ್ಯರ ಅಥವಾ ಆಹಾರತಜ್ಞರ ಸಲಹೆ ಪಡೆಯವುದು ಕೂಡಾ ಪ್ರಮುಖವಾಗುತ್ತದೆ.

ಗೋಧಿ ಪೌಷ್ಟಿಕ ಅಂಶಗಳಾದ ನಾರಿನ ಅಂಶ, ವಿಟಮಿನ್ ಬಿ, ಕಬ್ಬಿಣ ಮತ್ತು ಮ್ಯಾಗ್ನೇಶಿಯಂನಂಥ ಸತ್ವಗಳನ್ನು ಒಳಗೊಂಡಿರುವುದರಿಂದ ನಿರ್ದಿಷ್ಟ ವೈದ್ಯಕೀಯ ಸಲಹೆ ಇಲ್ಲದೇ ಗೋಧಿ ತ್ಯಜಿಸುವುದು ಅನಗತ್ಯ. ಇದು ತೀವ್ರ ಮಲಬದ್ಧತೆ, ವಿಟಮಿನ್ ಬಿ ಕೊರತೆಯಂಥ ಸಮಸ್ಯೆಗಳಿಗೆ ಕಾರಣವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News