ಟೊಮೆಟೊ, ಆಲೂಗಡ್ಡೆ, ಬದನೆಕಾಯಿ ಕರುಳು ಆರೋಗ್ಯಕ್ಕೆ ಉತ್ತಮವೇ?
ಹಲವು ಪುಕ್ಕಟ್ಟೆ ಆರೋಗ್ಯ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಆದರೆ ಇದಕ್ಕೆ ಯಾವುದೇ ಪೌಷ್ಟಿಕಾಂಶಯುಕ್ತ ತಾರ್ಕಿಕತೆ ಅಥವಾ ವೈಜ್ಞಾನಿಕ ಪುರಾವೆ ಇರುವುದಿಲ್ಲ. ಆಲೂಗಡ್ಡೆ, ಬದನೆಕಾಯಿ, ಬೆಲ್‍ಪೆಪ್ಪರ್, ಮೆಣಸು ಹಾಗೂ ಟೊಮ್ಯಾಟೊ ಬಳಸದಂತೆ ಇತ್ತೀಚೆಗೆ ಜನ ಎಚ್ಚರಿಕೆ ನೀಡುತ್ತಿರುತ್ತಾರೆ. ಇವುಗಳಿಲ್ಲದ ಆಹಾರಕ್ರಮವನ್ನು ಊಹಿಸಲು ಸಾಧ್ಯವಿಲ್ಲವಾದರೂ, ಕೆಲ ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳು, ಇದನ್ನು ಕಡಿಮೆ ಮಾಡುವಂತೆ ಹಾಗೂ ಆಹಾರ ಕ್ರಮದಿಂದ ಇದನ್ನು ತ್ಯಜಿಸುವಂತೆ ಸಲಹೆ ಮಾಡುತ್ತಾರೆ. ಇದರಲ್ಲಿನ ಟಾಕ್ಸಿನ್‍ಗಳು ಜನರಲ್ಲಿ ಆಹಾರ ಅಸಹಿಷ್ಣುತೆಗೆ ಕಾರಣವಾಗುತ್ತದೆ ಎನ್ನುವುದು ಅವರ ವಾದ.
ಆದರೆ ಸತ್ಯ ಇದಕ್ಕೆ ತದ್ವಿರುದ್ಧ. ಇವುಗಳ ಸೇವನೆಯಿಂದ ದೇಹಕ್ಕೆ ಅಡ್ಡ ಪರಿಣಾಮಗಳಿವೆ ಎಂಬ ಬಗ್ಗೆ ಯಾವ ವೈಜ್ಞಾನಿಕ ಪುರಾವೆಯೂ ಇಲ್ಲ. ಬದಲಾಗಿ ನಮ್ಮ ಚಯಾಪಚಯ ಆರೋಗ್ಯ, ನಾರಿನ ಅಂಶ ಮತ್ತು ಸೂಕ್ಷ್ಮ ಪೌಷ್ಟಿಕಾಂಶಗಳಿಂದ ಇದು ಸಮೃದ್ಧವಾಗಿದೆ.
ನೈಟ್‍ಶೇಡ್ ಕುಟುಂಬಕ್ಕೆ ಸೇರಿದ, ಕಹಿ ರುಚಿಯ ಈ ಗಿಡಗಳು ತಮ್ಮನ್ನು ತಾವೇ ಕೀಟಗಳಿಂದ ರಕ್ಷಿಸಿಕೊಳ್ಳುತ್ತವೆ. ಇದರಲ್ಲಿನ ಕೆಲ ಅಲ್ಕಲೈಡ್ ಅಂಶಗಳು ಮನುಷ್ಯ ಆರೋಗ್ಯದ ಮೇಳೆ ಧನಾತ್ಮಕ ಪರಿಣಾಮ ಬೀರುತ್ತವೆ ಹಾಗೂ ಕೆಲವು ಋಣಾತ್ಮಕ ಪರಿಣಾಮ ಬೀರಬಲ್ಲದು. ಉದಾಹರಣೆಗೆ ತಂಬಾಕಿನಲ್ಲಿ ಕಂಡುಬರುವ ರಾಸಾಯನಿಕಗಳು ಕ್ಯಾನ್ಸರ್ ಗೆ ಕಾರಣವಾಗಬಹುದು.
ಆದಾಗ್ಯೂ ಬಹುತೇಕ ಸೊಲನೈನ್ ಅಂಶಗಳು ಆಲೂಗಡ್ಡೆಯ ಸೇವನೆ ಮೂಲಕ ದೇಹಕ್ಕೆ ಸೇರುತ್ತವೆ. ಆಲೂ ಕಾಂಡ ಮತ್ತು ಎಲೆಗಳು ಹಲವು ಅಲ್ಕಲೈಡ್ ಗ್ಲಿಕೊಸೈಡ್‍ಗಳನ್ನು ಒಳಗೊಂಡಿರುತ್ತವೆ. ಆದರೆ ಇದರ ಬೇರು ಮತ್ತು ಸಿಪ್ಪೆಯಲ್ಲಿ ಈ ಅಂಶ ಕಡಿಮೆ ಇರುತ್ತದೆ. ಇದರ ಒಳಭಾಗದಲ್ಲಿ ಈ ಅಂಶ ಇರುವುದೇ ಇಲ್ಲ. ಸುಸ್ತು, ಅತಿಸಾರ, ವಾಂತಿ, ಹೊಟ್ಟೆ ತೊಳಸುವಿಕೆ, ಗಂಟಲು ಉರಿ, ಹೃದಯ ಸಮಸ್ಯೆ, ತಲೆನೋವಿನಂಥ ಸಮಸ್ಯೆಗಳು ಇದನ್ನು ಅಧಿಕವಾಗಿ ಬಳಸಿದಲ್ಲಿ ಕಂಡುಬರಬಹುದು.
ಆದರೆ ವಾಸ್ತವವಾಗಿ ಸೊಲನೈನ್ ವಿಷಕಾರಿಯಾಗುವುದು ತೀರಾ ಅಪರೂಪ. ಏಕೆಂದರೆ ಇದರ ಹಸಿರು ಹೊದಿಕೆಯನ್ನು ಮತ್ತು ಮೊಗ್ಗುಗಳನ್ನು ಅಡುಗೆಗೆ ಮುನ್ನ ತೆಗೆಯಲಾಗುತ್ತದೆ. ಇದು ಉತ್ತಮ ಕ್ರಮ. ಇದರ ಜತೆಗೆ ಅಡುಗೆಯಲ್ಲಿ ಕರಿಯುವುದು ಸೇರಿದ್ದು, ಇದರಿಂದ ಸೊಲನೈನ್ ಮಟ್ಟ ಕಡಿಮೆಯಾಗುತ್ತದೆ. ಅಧ್ಯಯನವೊಂದರ ಪ್ರಕಾರ, ಪ್ರತಿ ಕೆ.ಜಿ ದೇಹತೂಕಕ್ಕೆ 5 ಗ್ರಾಂವರೆಗೆ ಆಲೂಗಡ್ಡೆ ಬಳಸುವುದು ಯಾವುದೇ ಅಡ್ಡ ಪರಿಣಾಮ ಬೀರದು ಎಂದು ತಜ್ಞರು ಹೇಳುತ್ತಾರೆ.
ಕೃಪೆ: indianexpress.com