ಭಾರತೀಯರ ನಾಲ್ಕನೇ ತಂಡ ಇಸ್ರೇಲ್ ನಿಂದ ವಾಪಸ್ಸು
ಟೆಲ್ ಅವೀವ್: ಇಸ್ರೇಲ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಸ್ವದೇಶಕ್ಕೆ ತರೆತರುವ ಕಾರ್ಯಾಚರಣೆ ಅಂಗವಾಗಿ ವಿಶೇಷ ವಿಮಾನದಲ್ಲಿ 274 ಭಾರತೀಯರ ನಾಲ್ಕನೇ ತಂಡ ಶನಿವಾರ ಇಸ್ರೇಲ್ ನಿಂದ ವಾಪಸ್ಸಾಗಿದೆ.
ಆಪರೇಷನ್ ವಿಜಯ್ ಕಾರ್ಯಾಚರಣೆಯ ನಾಲ್ಕನೇ ತಂಡ ಇದಾಗಿದ್ದು, ಅಕ್ಟೋಬರ್ 12ರಂದು ಮೊದಲ ತಂಡ ತಾಯ್ನಾಡಿಗೆ ವಾಪಸ್ಸಾಗಿತ್ತು. ಅಕ್ಟೋಬರ್ 7ರಂದು ಇಸ್ರೇಲಿ ಪಟ್ಟಣಗಳ ಮೇಲೆ ಹಮಾಸ್ ದಾಳಿ ಮಾಡಿದ ದಿನದಿಂದ ಭೀತಿಯಲ್ಲಿ ಕಳೆಯುತ್ತಿರುವ, ಸ್ವದೇಶಕ್ಕೆ ವಾಪಸ್ಸಾಗಲು ಬಯಸುತ್ತಿರುವ ಭಾರತೀಯರನ್ನು ತಾಯ್ನಾಡಿಗೆ ಕರೆ ತರುವ ಪ್ರಯತ್ನ ನಡೆಯುತ್ತಿದೆ.
ಈ ಮಧ್ಯೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಫೆಲಸ್ತೀನ್ ಅಧ್ಯಕ್ಷ ಮೊಹ್ಮದ್ ಅಬ್ಬಾಸ್ ಅವರ ಜತೆ ಮೊದಲ ಬಾರಿಗೆ ಮಾತುಕತೆ ನಡೆಸಿದ್ದಾರೆ. ಎಲ್ಲ ನಾಗರಿಕರಿಗೆ ನೀರು, ಆಹಾರ ಮತ್ತು ಅಗತ್ಯ ಔಷಧೋಪಚಾರವನ್ನು ವ್ಯವಸ್ಥೆ ಮಾಡುವಂತೆ ಬೈಡನ್, ನೆತನ್ಯಾಹು ಅವರಿಗೆ ಸೂಚನೆ ನೀಡಿದ್ದಾರೆ. ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್, ಗಾಝಾ ಮೇಲೆ ದಾಳಿ ಆರಂಭಿಸಿರುವುದರಿಂದ ಯುದ್ಧಪರಿಸ್ಥಿತಿ ತಲೆದೋರಿದೆ.
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಶನಿವಾರ ಇರಾನ್ ನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರನ್ನು ಕತಾರ್ ನಲ್ಲಿ ಭೇಟಿ ಮಾಡಿ, ಇಸ್ರೇಲ್ ಮೇಲೆ ನಡೆಸಿದ ದಾಳಿ ಬಗ್ಗೆ ಚರ್ಚೆ ನಡೆಸಿದರು. ಜತೆಗೆ ಈ ಗುಂಪಿನ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವ ಭರವಸೆಯನ್ನು ಇರಾನ್ ನೀಡಿದೆ ಎಂದು ಹಮಾಸ್ ಹೇಳಿಕೆ ನೀಡಿದೆ.