ಸ್ಮೃತಿ ಇರಾನಿ- ರಾಹುಲ್ ಗಾಂಧಿ ನಡುವೆ ಉಡುಗೊರೆ ಸ್ಪರ್ಧೆ
ಲಕ್ನೋ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅಮೇಥಿ ಕ್ಷೇತ್ರದ ಮಾಜಿ ಸಂಸದ ರಾಹುಲ್ ಗಾಂಧಿ ಪರಸ್ಪರ ಪೈಪೋಟಿಯಲ್ಲಿ ಕ್ಷೇತ್ರದ ಜನತೆಗೆ ದೀಪಾವಳಿ ಶುಭ ಹಾರೈಸುವ ಸಂದರ್ಭದಲ್ಲಿ ಉಡುಗೊರೆಗಳನ್ನು ನೀಡುತ್ತಿರುವುದು 2024ರ ಸಾರ್ವತ್ರಿಕ ಚುನಾವಣೆಯ ಬಗ್ಗೆ ವದಂತಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಿ ರಾಹುಲ್ ವಿರುದ್ಧ ಈ ಕ್ಷೇತ್ರದಿಂದ ಜಯ ಸಾಧಿಸಿದ್ದ ಸ್ಮೃತಿ ಇರಾನಿ ಕ್ಷೇತ್ರದ ಜನತೆಗೆ ಉಡುಗೊರೆಯಾಗಿ ಮೊಬೈಲ್ ಫೋನ್, ಗೋಡೆ ಗಡಿಯಾರ ಮತ್ತು ಸೀರೆಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಸಂಸತ್ತಿನಲ್ಲಿ ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಹುಲ್ ಗಾಂಧಿ, ಈ ಕ್ಷೇತ್ರದ ನೂರಾರು ಮಂದಿಗೆ ಸಿಹಿತಿಂಡಿಯ ಜತೆಗೆ ಶರ್ಟ್ ಮತ್ತು ಪ್ಯಾಂಟ್ ಗಳನ್ನು ವಿತರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಉಡುಗೊರೆ ವಿತರಣೆಯನ್ನು ದೃಢಪಡಿಸಿರುವ ಬಿಜೆಪಿ ವಕ್ತಾರ ಗೋವಿಂದ್ ಚೌಹಾಣ್, ಸ್ಮೃತಿ ಇರಾನಿಯವರು ಸಾಮಾಜಿಕವಾಗಿ ದುರ್ಬಲರಿಗೆ, ಅಪೌಷ್ಟಿಕತೆ ಹೊಂದಿರುವವರಿಗೆ ಮತ್ತು ಅಂಗವಿಕಲರಿಗೆ ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಗತ್ಯ ಇರುವವರಿಗೆ ಉಡುಗೊರೆಗಳು ತಲುಪುವುದನ್ನು ಖಾತರಿಪಡಿಸಿಕೊಂಡಿದ್ದೇವೆ. ವರ್ಷವಿಡೀ ಇರಾನಿ ಕೈಗೊಳ್ಳುತ್ತಿರುವ ನಿಸ್ವಾರ್ಥ ಸಾರ್ವಜನಿಕ ಸೇವೆಯ ಬಗೆಗಿನ ಬದ್ಧತೆಯ ಭಾಗ ಎಂದು ಅವರು ಪ್ರತಿಪಾದಿಸಿದ್ದಾರೆ.
ಕ್ಷೇತ್ರದ ಜನತೆಗೆ 'ದೀದಿ' ಮತ್ತು 'ಬೇಟಿ' ಆಗಿರುವ ಸ್ಮೃತಿ ಇರಾನಿಯವರ ಪರವಾಗಿ ಮತ ಚಲಾಯಿಸುವ ಮೂಲಕ ಉಡುಗೊರೆ ಸ್ವೀಕರಿಸಿದ ಜನತೆ ಕೃತಜ್ಞತೆ ವ್ಯಕ್ತಪಡಿಸಬೇಕು ಎಂದು ಅಮೇಥಿ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ದಯಾಶಂಕರ್ ಯಾದವ್ ಹೇಳಿರುವ ವಿಡಿಯೊ ವೈರಲ್ ಆಗಿದೆ.