ಪಾಕಿಸ್ತಾನದ ನೌಕಾನೆಲೆಯ ಮೇಲೆ ಉಗ್ರರ ದಾಳಿ, 4 ಉಗ್ರರ ಹತ್ಯೆ; ಯೋಧ ಸಾವು
ಇಸ್ಲಾಮಾಬಾದ್, ಮಾ.26: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತದಲ್ಲಿರುವ ದೇಶದ ಅತೀ ದೊಡ್ಡ ನೌಕಾ ವಾಯುನಿಲ್ದಾಣ ಪಿಎನ್ಎಸ್ ಸಿದ್ಧಿಕ್ಗೆ ನುಗ್ಗಲು ಯತ್ನಿಸಿದ ಪ್ರಯತ್ನವನ್ನು ವಿಫಲಗೊಳಿಸಿದ್ದು 4 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಓರ್ವ ಯೋಧ ಮೃತಪಟ್ಟಿದ್ದಾನೆ ಎಂದು ಪಾಕಿಸ್ತಾನದ ಭದ್ರತಾ ಪಡೆಗಳು ಮಂಗಳವಾರ ಹೇಳಿವೆ.
ಟರ್ಬಟ್ ನಗರದಲ್ಲಿರುವ ನೌಕಾ ವಿಮಾನನಿಲ್ದಾಣಕ್ಕೆ ಸೋಮವಾರ ರಾತ್ರಿ ಪ್ರತ್ಯೇಕತಾವಾದಿ ಸಂಘಟನೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್ಎ)ಯ ಸದಸ್ಯರು ನುಗ್ಗಲು ಪ್ರಯತ್ನಿಸಿದರು ಎಂದು ವರದಿಯಾಗಿದೆ. ಬಿಎಲ್ಎ ಗುಂಪನ್ನು ಭಯೋತ್ಪಾದಕ ಸಂಘಟನೆಯೆಂದು ಪಾಕಿಸ್ತಾನ ಗುರುತಿಸಿದೆ. ನೌಕಾನೆಲೆಯ ವಿಮಾನ ನಿಲ್ದಾಣದ ಮೇಲೆ ಮೂರು ದಿಕ್ಕುಗಳಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಆದರೆ ಭದ್ರತಾ ಪಡೆಗಳು ದಾಳಿಯನ್ನು ವಿಫಲಗೊಳಿಸಿವೆ ಎಂದು ಮಕ್ರಾನ್ ಕಮಿಷನರ್ ಸಯೀದ್ ಅಹ್ಮದ್ ಉಮ್ರಾನಿ ಹೇಳಿದ್ದಾರೆ. ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 4 ಉಗ್ರರು ಹತರಾಗಿದ್ದು ಓರ್ವ ಯೋಧ ಸಾವನ್ನಪ್ಪಿದ್ದಾನೆ. ಆದರೆ ನೌಕಾನೆಲೆಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಷೇಧಿತ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ದಾಳಿಯ ಹೊಣೆ ವಹಿಸಿಕೊಂಡಿದೆ. ಈ ವರ್ಷದಲ್ಲಿ ಸರಕಾರಿ ಸಂಸ್ಥೆಗಳು ಹಾಗೂ ಭದ್ರತಾ ಪಡೆಗಳ ಮೇಲೆ ಬಿಎಲ್ಎ ನಡೆಸುತ್ತಿರುವ ಮೂರನೇ ಪ್ರಮುಖ ದಾಳಿ ಇದಾಗಿದೆ. ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಭಾಗದಲ್ಲಿರುವ ಬಲೂಚಿಸ್ತಾನದಲ್ಲಿ ಹಿಂಸಾತ್ಮಕ ಪ್ರತ್ಯೇಕತಾವಾದಿ ಕೃತ್ಯಗಳು ಹೆಚ್ಚುತ್ತಿವೆ.