ಚೀನಾದಲ್ಲಿ ಭಾರೀ ಮಳೆಗೆ 15 ಮಂದಿ ಮೃತ್ಯು, 4 ಮಂದಿ ನಾಪತ್ತೆ

Update: 2023-07-05 15:57 GMT

Photo: NDTV.com

ಬೀಜಿಂಗ್: ನೈಋತ್ಯ ಚೀನಾದಲ್ಲಿ ಸೋಮವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ 15 ಮಂದಿ ಮೃತಪಟ್ಟಿದ್ದು ಇತರ 4 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರಕಾರಿ ಸ್ವಾಮ್ಯದ `ಕ್ಸಿನ್ಹುವ' ಸುದ್ಧಿಸಂಸ್ಥೆ ವರದಿ ಮಾಡಿದೆ.

ನೈಋತ್ಯ ಚೀನಾದ ಚಾಂಗ್ಕ್ವಿಂಗ್ ಪ್ರದೇಶದಲ್ಲಿ ಸೋಮವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಬುಧವಾರ ಬೆಳಗ್ಗಿನವರೆಗಿನ ಮಾಹಿತಿಯಂತೆ 15 ಮಂದಿ ಮೃತಪಟ್ಟಿದ್ದು ಇತರ 4 ಮಂದಿ ನಾಪತ್ತೆಯಾಗಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟು ಮಾಡಿದೆ. ಮಧ್ಯ ಮತ್ತು ನೈಋತ್ಯ ಚೀನಾದ ಹಲವು ಪ್ರದೇಶಗಳಲ್ಲಿ ಮಂಗಳವಾರ ಅಪಾಯದ ಸಂದೇಶ ರವಾನಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಚಾಂಗ್ಕ್ವಿಂಗ್ ನಗರದ ಹೊರವಲಯದಲ್ಲಿ ಪ್ರವಾಹದಿಂದಾಗಿ ರೈಲ್ವೇ ಸೇತುವೆ ಕುಸಿದುಬಿದ್ದ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲುಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಜನರ ಸುರಕ್ಷತೆ ಮತ್ತು ಮನೆ, ಆಸ್ತಿಗಳ ರಕ್ಷಣೆಗೆ ಪ್ರಥಮ ಆದ್ಯತೆ ನೀಡುವಂತೆ ಮತ್ತು ಎಲ್ಲಾ ಹಂತದ ಸಿಬಂದಿಗಳೂ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸುವಂತೆ ಅಧ್ಯಕ್ಷ ಕ್ಸಿಜಿಂಪಿಂಗ್ ಸೂಚಿಸಿರುವುದಾಗಿ ವರದಿ ಹೇಳಿದೆ. ಜುಲೈ ಆರಂಭದಿಂದ ಚೀನಾದ ಹಲವೆಡೆ ನಿರಂತರ ಮಳೆಯಾಗುತ್ತಿದ್ದು ಸಿಚುವಾನ್ ಪ್ರಾಂತದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು ಸುಮಾರು 4,60,000 ಜನರು ಸಮಸ್ಯೆಗೆ ಒಳಗಾಗಿದ್ದಾರೆ. 85,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News