ಇರಾನ್ | ಕಲ್ಲಿದ್ದಲು ಗಣಿ ಸ್ಫೋಟದಲ್ಲಿ 51 ಸಾವು ; 18 ಮಂದಿಗೆ ಗಾಯ
ಟೆಹ್ರಾನ್ : ಪೂರ್ವ ಇರಾನ್‍ನಲ್ಲಿ ಕಲ್ಲಿದ್ದಲು ಗಣಿಯೊಂದರಲ್ಲಿ ನಡೆದ ಸ್ಫೋಟದಲ್ಲಿ 51 ಮಂದಿ ಸಾವನ್ನಪ್ಪಿದ್ದು ಇತರ 18 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಇರ್ನಾ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.
ದಕ್ಷಿಣ ಖೊರಸಾನ್ ಪ್ರಾಂತದ ತಬಾಸ್ ನಗರದಲ್ಲಿರುವ ಗಣಿಯಲ್ಲಿ ಶನಿವಾರ ರಾತ್ರಿ ಸ್ಫೋಟ ಸಂಭವಿಸಿದ್ದು ಆಗ 69 ಕಾರ್ಮಿಕರು ಗಣಿಯೊಳಗಿದ್ದರು. ಗಣಿಯ ಎರಡು ಬ್ಲಾಕ್‍ಗಳಲ್ಲಿ ಮಿಥೇನ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿದ್ದು ಗಣಿಯೊಳಗೆ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾರೆ.
ಗಾಯಗೊಂಡಿರುವ ಕೆಲವು ಕಾರ್ಮಿಕರು ಇನ್ನೂ ಗಣಿಯೊಳಗೆ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಗಣಿಯೊಳಗೆ ತುಂಬಿಕೊಂಡಿರುವ ಗ್ಯಾಸ್‍ನಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ಗಣಿಯೊಳಗೆ ಸಿಲುಕಿರುವವರಿಗೆ ಆಮ್ಲಜನಕ ಪೂರೈಸಿ ಅವರನ್ನು ತಕ್ಷಣ ಹೊರಗೆ ಕರೆತರುವುದಕ್ಕೆ ಆದ್ಯತೆ ನೀಡಲಾಗಿದೆ ಎಂದು ಇರಾನ್‍ನ ರೆಡ್‍ಕ್ರೆಸೆಂಟ್ ಮೂಲಗಳು ಹೇಳಿವೆ.