ಉಕ್ರೇನ್ ಆಸ್ಪತ್ರೆ ಮೇಲೆ ರಶ್ಯದ ದಾಳಿಯಲ್ಲಿ 6 ಮಂದಿ ಮೃತ್ಯು: ವರದಿ

Update: 2024-09-28 15:39 GMT

PC : PTI (ಸಾಂದರ್ಭಿಕ ಚಿತ್ರ)

ಕೀವ್ : ಈಶಾನ್ಯ ಉಕ್ರೇನ್‍ನ ಸುಮಿ ನಗರದಲ್ಲಿರುವ ವೈದ್ಯಕೀಯ ಕೇಂದ್ರದ ಮೇಲೆ ಶನಿವಾರ ಬೆಳಿಗ್ಗೆ ರಶ್ಯ ನಡೆಸಿದ ಎರಡು ಸತತ ದಾಳಿಗಳಲ್ಲಿ 6 ಮಂದಿ ಹತರಾಗಿದ್ದಾರೆ ಎಂದು ಉಕ್ರೇನ್‍ನ ಆಂತರಿಕ ಇಲಾಖೆಯ ಸಚಿವ ಇಹೋರ್ ಕ್ಲಿಮೆಂಕೋ ಹೇಳಿದ್ದಾರೆ.

ಮೊದಲ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಆಸ್ಪತ್ರೆಯ ಅಂತಸ್ತುಗಳಿಗೆ ಹಾನಿಯಾಗಿದೆ. ರೋಗಿಗಳು ಹಾಗೂ ಸಿಬ್ಬಂದಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಸ್ಥಳಾಂತರ ಕಾರ್ಯ ನಡೆಯುತ್ತಿದ್ದಂತೆಯೇ ರಶ್ಯ ಪಡೆ ಮತ್ತೊಂದು ದಾಳಿ ನಡೆಸಿದ್ದು ಮತ್ತೆ 5 ಮಂದಿ ಹತರಾಗಿದ್ದಾರೆ ಎಂದವರು ಹೇಳಿದ್ದಾರೆ.

ಸುಮಿ ನಗರ ರಶ್ಯದ ಗಡಿಯಿಂದ ಕೇವಲ 32 ಕಿ.ಮೀ ದೂರದಲ್ಲಿದೆ. ಈ ಮಧ್ಯೆ, ಶುಕ್ರವಾರ ರಾತ್ರಿಯಿಂದ ಉಕ್ರೇನ್ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿ, ಎರಡು ಕ್ರೂಸ್ ಕ್ಷಿಪಣಿ ಹಾಗೂ 73 ಡ್ರೋನ್‍ಗಳನ್ನು ರಶ್ಯ ಪ್ರಯೋಗಿಸಿದ್ದು ಇದರಲ್ಲಿ 2 ಕ್ರೂಸ್ ಕ್ಷಿಪಣಿ ಹಾಗೂ 69 ಡ್ರೋನ್‍ಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ. ರಾಜಧಾನಿ ಕೀವ್‍ನ ಹೊರವಲಯದಲ್ಲಿ ರಶ್ಯದ ಸುಮಾರು 15 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಬೆಂಕಿಯಲ್ಲಿ ಉರಿಯುತ್ತಿದ್ದ ಡ್ರೋನ್‍ಗಳ ಚೂರು ಬಿದ್ದು ಜನವಸತಿ ಇಲ್ಲದ ಕಟ್ಟಡಕ್ಕೆ ಹಾನಿಯಾಗಿದೆ. ಯಾವುದೇ ಸಾವು-ನೋವಿನ ವರದಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News