ನಾವು ʼಇಂಡಿಯಾ ಔಟ್ʼ ಅಜೆಂಡಾ ಹೊಂದಿಲ್ಲ: ಮಾಲ್ದೀವ್ಸ್ ಅಧ್ಯಕ್ಷ ಮುಯಿಝು

Update: 2024-09-28 06:47 GMT

ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು (PTI)

ಹೊಸದಿಲ್ಲಿ: ಮಾಲ್ದೀವ್ಸ್ ನಲ್ಲಿ ವಿದೇಶಿ ಮಿಲಿಟರಿಯ ಉಪಸ್ಥಿತಿ ದೇಶಕ್ಕೆ "ಗಂಭೀರ ಸಮಸ್ಯೆ" ಉಂಟು ಮಾಡುತ್ತಿದೆ. ಆದರೆ ನಾವು "ಇಂಡಿಯಾ ಔಟ್ʼ ಎಂಬ ಅಜೆಂಡಾವನ್ನು ಹೊಂದಿಲ್ಲ ಎಂದು ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಹೇಳಿದ್ದಾರೆ.

ಅಮೆರಿಕದಲ್ಲಿ ವಿಶ್ವಸಂಸ್ಥೆಯ 79ನೇ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಮುಹಮ್ಮದ್ ಮುಯಿಝು, ನಾವು "ಇಂಡಿಯಾ ಔಟ್" ಅಜೆಂಡಾವನ್ನು ಹೊಂದಿಲ್ಲ. ಆದರೆ ಈ ನೆಲದಲ್ಲಿ ವಿದೇಶಿ ಸೈನಿಕರ ಉಪಸ್ಥಿತಿಯಿಂದ ಮಾಲ್ದೀವ್ಸ್ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ಮಾಲ್ದೀವ್ಸ್ ಜನರು ದೇಶದಲ್ಲಿ ಒಬ್ಬನೇ ಒಬ್ಬ ವಿದೇಶಿ ಸೈನಿಕ ಇರುವುದನ್ನು ಬಯಸುವುದಿಲ್ಲ ಎಂದು ಅವರು ಹೇಳಿರುವ ಬಗ್ಗೆ ಮಾಲ್ದೀವ್ಸ್ ಸುದ್ದಿ ಪೋರ್ಟಲ್ adhadhu.com ವರದಿ ಮಾಡಿದೆ.

ಚೀನಾ ಪರ ಒಲವು ಮಾಲ್ದೀವ್ಸ್ ಮತ್ತು ಭಾರತದ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸಿತ್ತು. ಭಾರತವು ಮಾಲ್ದೀವ್ಸ್ ಗೆ ಉಡುಗೊರೆಯಾಗಿ ನೀಡಿದ್ದ ಮೂರು ವಿಮಾನಗಳ ನಿರ್ವಹಣೆಗೆ ಇದ್ದ 90 ಭಾರತೀಯ ಸೈನಿಕರನ್ನು ಮರಳಿ ಕರೆಯಿಸಿಕೊಳ್ಳುವಂತೆ ಮುಯಿಝು ಭಾರತಕ್ಕೆ ಆಗ್ರಹಿಸಿದ್ದರು. ಅದರಂತೆ ಮೇ 10ರಂದು ಸೈನಿಕರನ್ನು ಭಾರತ ಹಿಂದಕ್ಕೆ ಕರೆಸಿಕೊಂಡಿತ್ತು.

ಇದಲ್ಲದೆ ಮೊಹಮ್ಮದ್ ಮುಯಿಝು ಕಳೆದ ವರ್ಷ ಇಬ್ಬರು ಸಚಿವರು ಭಾರತದ ಪ್ರಧಾನಿ ಮೋದಿಯನ್ನು ಟೀಕಿಸಿದ್ದನ್ನು ಖಂಡಿಸಿದ್ದಾರೆ. ಯಾವುದೇ ಭಾರತ ವಿರೋಧಿ ಕಾರ್ಯಸೂಚಿಯನ್ನು ಅನುಸರಿಸುವುದನ್ನು ನಿರಾಕರಿಸಿದ್ದಾರೆ.

ಯಾವುದೇ ವ್ಯಕ್ತಿಯ ವಿರುದ್ಧ ನಿಂದನೆಯ ಮಾತುಗಳನ್ನು ನಾನು ಸಹಿಸುವುದಿಲ್ಲ. ಅವರು ಪ್ರಮುಖ ನಾಯಕರೇ ಆಗಿರಲಿ ಅಥವಾ ಸಾಮಾನ್ಯ ವ್ಯಕ್ತಿಯೇ ಆಗಿರಲಿ, ಪ್ರತಿಯೊಬ್ಬ ವ್ಯಕ್ತಿಗೂ ಘನತೆ ಇರುತ್ತದೆ. ಹೀಗಾಗಿ ಮೋದಿ ವಿರುದ್ಧ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News