ನಸ್ರುಲ್ಲಾ ಮೃತ್ಯು | ತುರ್ತು ಸಭೆ ನಡೆಸಿದ ಇರಾನ್

Update: 2024-09-28 16:25 GMT

ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾ (Photo credit: en.wikipedia.org)

ಟೆಹ್ರಾನ್ : ದಕ್ಷಿಣ ಬೈರೂತ್‍ನಲ್ಲಿ ಇಸ್ರೇಲ್‍ನ ತೀವ್ರ ವೈಮಾನಿಕ ದಾಳಿಯ ಬಳಿಕ ಇರಾನ್‍ನ ಪರಮೋಚ್ಛ ಮುಖಂಡ ಅಯತುಲ್ಲಾ ಆಲಿ ಖಾಮಿನೈ ದೇಶದ ಉನ್ನತ `ರಾಷ್ಟ್ರೀಯ ಭದ್ರತಾ ಮಂಡಳಿ'ಯ ತುರ್ತು ಸಭೆ ನಡೆಸಿದರು ಎಂದು ಇರಾನ್‍ನ ಇಬ್ಬರು ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ದುಷ್ಟ ಆಡಳಿತವನ್ನು (ಇಸ್ರೇಲ್) ಎದುರಿಸಲು ಲೆಬನಾನ್‍ನ ಜನತೆ ಹಾಗೂ ಹೆಮ್ಮೆಯ ಹಿಜ್ಬುಲ್ಲಾ ಪರ ನಿಲ್ಲುವಂತೆ ಮುಸ್ಲಿಮರಿಗೆ ಖಾಮಿನೈ ಕರೆ ನೀಡಿದರು ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಇಸ್ರೇಲ್‍ನ ಸಂಕುಚಿತ ದೃಷ್ಟಿಯ ನೀತಿಯನ್ನು ಖಂಡಿಸಿದ ಅವರು `ಈ ವಲಯದ ಭವಿಷ್ಯವು `ಪ್ರತಿರೋಧ ಪಡೆಗಳಿಂದ' ನಿರ್ಧರಿಸಲ್ಪಡುತ್ತದೆ. ಲೆಬನಾನ್‍ನಲ್ಲಿ ಹಿಜ್ಬುಲ್ಲಾಗಳ ಸದೃಢ ರಚನೆಗೆ ಗಮನಾರ್ಹ ಹಾನಿಯನ್ನು ಉಂಟು ಮಾಡುವಷ್ಟು ಸಾಮರ್ಥ್ಯ ಇಸ್ರೇಲ್‍ಗೆ ಇಲ್ಲ. ಮಧ್ಯಪ್ರಾಚ್ಯದಾದ್ಯಂತ ಇಸ್ರೇಲ್ ಮತ್ತದರ ಮಿತ್ರ ಅಮೆರಿಕವನ್ನು ಎದುರಿಸುತ್ತಿರುವ `ಪ್ರತಿರೋಧ ಪಡೆ' ಈ ನಿರ್ಣಾಯಕ ಸಂದರ್ಭದಲ್ಲಿ ಹಿಜ್ಬುಲ್ಲಾ ಜತೆ ನಿಲ್ಲಬೇಕಾಗಿದೆ' ಎಂದರು.

ಈ ಮಧ್ಯೆ, ಖಾಮಿನೈ ಅವರನ್ನು ದೇಶದೊಳಗಿನ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿರುವ ಪ್ರದೇಶಕ್ಕೆ ಸ್ಥಳಾಂತರಿಸಿರುವುದಾಗಿ ಇರಾನ್‍ನ ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

► ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಇರಾನ್‍ನ ಹಿರಿಯ ಸೇನಾಧಿಕಾರಿ ಮೃತ್ಯು

 ಲೆಬನಾನ್‍ನಲ್ಲಿ ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾ ಜತೆ ಇರಾನ್‍ನ ರೆವೊಲ್ಯುಷನರಿ ಗಾಡ್ರ್ಸ್ ಕಾಪ್ರ್ಸ್ (ಐಆರ್‍ಜಿಸಿ)ನ ಉನ್ನತ ಜನರಲ್ ಮೃತಪಟ್ಟಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ಶನಿವಾರ ವರದಿ ಮಾಡಿದೆ.

ಹಿಜ್ಬುಲ್ಲಾ ಮುಖ್ಯಸ್ಥರನ್ನು ಬಲಿಪಡೆದ ಇಸ್ರೇಲ್ ದಾಳಿಯಲ್ಲಿ ಐಆರ್‍ಜಿಸಿ ಕಾರ್ಯಾಚರಣೆಯ ಉಪ ಕಮಾಂಡರ್ ಜನರಲ್ ಅಬ್ಬಾಸ್ ನಿಲ್ಪೋರೌಶನ್ ಮೃತಪಟ್ಟಿದ್ದಾರೆ ಎಂದು ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದ್ದು ಹೆಚ್ಚಿನ ಮಾಹಿತಿ ನೀಡಿಲ್ಲ.

Full View

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News