ಅಗ್ರಗಣ್ಯ ಮಿತ್ರರಾಷ್ಟ್ರವಾಗಿ ಭಾರತವನ್ನು ಪರಿಗಣಿಸುವ ಮಸೂದೆ ಅಮೆರಿಕ ಸೆನೆಟ್ ನಲ್ಲಿ ಮಂಡನೆ
ವಾಷಿಂಗ್ಟನ್: ಭಾರತವನ್ನು ಅಗ್ರಗಣ್ಯ ಮಿತ್ರರಾಷ್ಟ್ರವಾಗಿ ಪರಿಗಣಿಸುವ ಮಸೂದೆಯನ್ನು ಅಮೆರಿಕದ ಸೆನೆಟ್ ಸದಸ್ಯ ಮಾರ್ಕೊ ರೂಬಿಯೊ ಗುರುವಾರ ಅಮೆರಿಕದ ಸಂಸತ್ತಿನಲ್ಲಿ ಮಂಡಿಸಿದರು. ತಂತ್ರಜ್ಞಾನ ವರ್ಗಾವಣೆ ಮತ್ತು ಭಾರತಕ್ಕೆ ಹೆಚ್ಚುತ್ತಿರುವ ಅಪಾಯದ ಹಿನ್ನೆಲೆಯಲ್ಲಿ ಭಾರತವನ್ನು ಬೆಂಬಲಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಜಪಾನ್, ಇಸ್ರೇಲ್, ಕೊರಿಯಾ ಮತ್ತು ನ್ಯಾಟೊ ಮಿತ್ರರಾಷ್ಟ್ರಗಳಿಗೆ ಸಮಾನವಾಗಿ ಭಾರತವನ್ನು ಕೂಡಾ ಪರಿಗಣಿಸಲು ಈ ಮಸೂದೆ ಪ್ರಸ್ತಾವಿಸಿದೆ.
ಭಾರತದ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದು ಪತ್ತೆಯಾದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಭದ್ರತಾ ನೆರವನ್ನು ನೀಡದಿರಲು ಕೂಡಾ ಈ ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ.
"ಕಮ್ಯುನಿಸ್ಟ್ ರಾಷ್ಟ್ರವಾದ ಚೀನಾ ತನ್ನ ಗಡಿಯನ್ನು ವಿಸ್ತರಿಸುವ ಆಕ್ರಮಣಕಾರಿ ಪ್ರವೃತ್ತಿಯನ್ನು ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಮುಂದುವರಿಸಿದ್ದು, ನಮ್ಮ ಪ್ರಾದೇಶಿಕ ಪಾಲುದಾರರ ಸಾರ್ವಭೌಮತ್ವ ಮತ್ತು ಸ್ವಾಯತ್ತತೆಗೆ ಅಪಾಯ ಒಡ್ಡುತ್ತಿದೆ. ಈ ಕೀಳು ತಂತ್ರಗಳನ್ನು ವಿರೋಧಿಸುವ ಉದ್ದೇಶದಿಂದ ಅಗತ್ಯ ಬೆಂಬಲವನ್ನು ಒದಗಿಸುವುದು ಅಮೆರಿಕಕ್ಕೆ ಮಹತ್ವದ್ದು. ಭಾರತ ಸೇರಿದಂತೆ ಈ ಭಾಗದ ಎಲ್ಲ ದೇಶಗಳು ಖಂಡಿತವಾಗಿಯೂ ಒಬ್ಬಂಟಿಯಲ್ಲ" ಎಂದು ಅಮೆರಿಕ-ಭಾರತ ರಕ್ಷಣಾ ಸಹಕಾರ ಕಾಯ್ದೆಯನ್ನು ಸೆನೆಟ್ ನಲ್ಲಿ ಮಂಡಿಸಿದ ರೂಬಿಯೊ ಅಭಿಪ್ರಾಯಪಟ್ಟರು.
ಚುನಾವಣಾ ವರ್ಷದಲ್ಲಿ ಅತ್ಯಲ್ಪ ಕಾಲಾವಧಿಯಲ್ಲಿ ವಿಭಜಿತ ಸಂಸತ್ತಿನಲ್ಲಿ ಈ ಮಸೂದೆ ಆಂಗೀಕಾರವಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಭಾರತ- ಅಮೆರಿಕ ಸಂಬಂಧಕ್ಕೆ ಉಭಯ ಪಕ್ಷಗಳ ಪಟ್ಟದಲ್ಲಿ ಆದ್ಯತೆ ಇರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಮತ್ತೆ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಕಮ್ಯುನಿಸ್ಟ್ ಚೀನಾದ ಪ್ರಭಾವಕ್ಕೆ ಪ್ರತಿರೋಧ ಒಡ್ಡುವ ಉದ್ದೇಶದಿಂದ ಅಮೆರಿಕ- ಭಾರತ ಪಾಲುದಾರಿಕೆ ಮಹತ್ವದ್ದು ಎಂದು ಮಸೂದೆ ಪ್ರತಿಪಾದಿಸಿದೆ. ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ನಮ್ಮ ಪ್ರಮುಖ ರಾಜತಾಂತ್ರಿಕ, ಆರ್ಥಿಕ ಮತ್ತು ಸೇನಾ ಸಂಬಂಧವನ್ನು ವಿಸ್ತರಿಸುವುದು ಅಗತ್ಯ ಎಂದು ವಿವರಿಸಲಾಗಿದೆ.