ಇಸ್ರೇಲ್‍ಗೆ ಜರ್ಮನಿಯಿಂದ ಶಸ್ತ್ರಾಸ್ತ್ರ ನೆರವು ಆರೋಪ | ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ
ಹೇಗ್: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧಕ್ಕೆ ಜರ್ಮನಿ ಶಸ್ತ್ರಾಸ್ತ್ರ ನೆರವು ನೀಡುತ್ತಿದೆ ಎಂದು ನಿಕರಾಗುವಾ ಆರೋಪಿಸಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣದ ವಿಚಾರಣೆ ಸೋಮವಾರ ಆರಂಭಗೊಂಡಿದೆ.
ಇಸ್ರೇಲ್‍ಗೆ ಜರ್ಮನ್‍ನ ಶಸ್ತ್ರಾಸ್ತ್ರ ಮತ್ತಿತರ ನೆರವು ಗಾಝಾ ಯುದ್ಧದಲ್ಲಿ ನರಹತ್ಯೆ ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಗೆ ಕಾರಣವಾಗುತ್ತಿದೆ. ಆದ್ದರಿಂದ ಜರ್ಮನಿಯ ನೆರವು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ನಿಕರಾಗುವಾ ಸಲ್ಲಿಸಿರುವ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ನರಹತ್ಯೆಯನ್ನು ತಡೆಯುವ ಅಥವಾ ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸುವ ತನ್ನ ಬದ್ಧತೆಯನ್ನು ಗೌರವಿಸಲು ಜರ್ಮನಿ ವಿಫಲವಾಗಿದೆ. ಆತ್ಮರಕ್ಷಣೆ(ಸ್ವಯಂರಕ್ಷಣೆ) ಮತ್ತು ನರಹತ್ಯೆಯ ನಡುವಿನ ವ್ಯತ್ಯಾಸವನ್ನು ಜರ್ಮನಿ ತಿಳಿದುಕೊಂಡಿಲ್ಲ ಎಂದು ಕಾಣುತ್ತದೆ' ಎಂದು ನೆದರ್ಲ್ಯಾಂಡ್‍ಗೆ ನಿಕರಾಗುವಾದ ರಾಯಭಾರಿ ಕಾರ್ಲೋಸ್ ಜೋಸ್ ಆರ್ಗುವೆಲೊ ಗೊಮೆಝ್ 16 ನ್ಯಾಯಾಧೀಶರ ಸಮಿತಿಯ ಎದುರು ವಾದ ಮಂಡಿಸಿದರು.
ಈ ಹೇಳಿಕೆಯನ್ನು ತಿರಸ್ಕರಿಸಿದ ಜರ್ಮನಿಯ ವಿದೇಶಾಂಗ ಇಲಾಖೆಯ ವಕ್ತಾರ ಸೆಬಾಸ್ಟಿಯನ್ ಫಿಷರ್ `ಜರ್ಮನಿ ನರಹತ್ಯೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯವನ್ನು ಅಥವಾ ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿಲ್ಲ. ನಾವು ಈ ಅಂಶವನ್ನು ಅಂತರಾಷ್ಟ್ರೀಯ ನ್ಯಾಯಾಲಯದ ಎದುರು ವಿವರವಾಗಿ ಮಂಡಿಸಲಿದ್ದೇವೆ' ಎಂದರು.
ಜರ್ಮನಿಯು ಯುದ್ಧಸಾಮಾಗ್ರಿ ಸೇರಿದಂತೆ ಇಸ್ರೇಲ್‍ಗೆ ನೀಡುತ್ತಿರುವ ನೆರವನ್ನು ತಕ್ಷಣ ಸ್ಥಗಿತಗೊಳಿಸಬೇಕು. ಇದುವರೆಗೆ ಒದಗಿಸಿರುವ ನೆರವು ನರಹತ್ಯೆಗೆ ಸಂಬಂಧಿಸಿದ ನಿರ್ಣಯ ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಗೆ ಬಳಕೆಯಾಗಿರಬಹುದು' ಎಂದು ಪ್ರತಿಪಾದಿಸಿರುವ ನಿಕರಾಗುವ, ಈ ಕುರಿತು ಪ್ರಾಥಮಿಕ ಆದೇಶ ಜಾರಿಗೊಳಿಸಬೇಕೆಂದು ಅಂತರಾಷ್ಟ್ರೀಯ ನ್ಯಾಯಾಲಯವನ್ನು ಕೋರಿದೆ. ಜತೆಗೆ, ಗಾಝಾದಲ್ಲಿ ವಿಶ್ವಸಂಸ್ಥೆ ನೆರವು ಏಜೆನ್ಸಿಗೆ ನೀಡುತ್ತಿರುವ ನೆರವನ್ನು ಮುಂದುವರಿಸುವಂತೆ ಜರ್ಮನಿಗೆ ಆದೇಶಿಸುವಂತೆಯೂ ನಿಕರಾಗುವಾ ಕೋರಿದೆ. ಜರ್ಮನಿಯು ದಶಕಗಳಿಂದಲೂ ಇಸ್ರೇಲ್‍ನ ಕಟ್ಟಾ ಬೆಂಬಲಿಗ ದೇಶವಾಗಿದೆ. ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್‍ನ ಮೇಲೆ ದಾಳಿ ನಡೆಸಿದ ಬಳಿಕ ಪ್ರತಿಕ್ರಿಯಿಸಿದ್ದ ಜರ್ಮನಿಯ ಛಾನ್ಸಲರ್ ಒಲಾಫ್ ಶ್ಹಾಲ್ಝ್ `ನಮ್ಮ ಸ್ವಂತ ಇತಿಹಾಸ, ಹತ್ಯಾಕಾಂಡದಿಂದ ಉದ್ಭವಿಸಿದ ನಮ್ಮ ಜವಾಬ್ದಾರಿ, ಇಸ್ರೇಲ್‍ನ ಭದ್ರತೆಯ ಪರ ನಿಲ್ಲಲು ನಮ್ಮನ್ನು ಬದ್ಧಗೊಳಿಸಿದೆ' ಎಂದಿದ್ದರು. ಆದರೆ, ಗಾಝಾ ಯುದ್ಧದಲ್ಲಿ ನಾಗರಿಕರ ಸಾವುನೋವಿನ ಪ್ರಕರಣ ಹೆಚ್ಚುತ್ತಿರುವ ವರದಿಯಾಗುತ್ತಿದ್ದಂತೆಯೇ ನಿಲುವು ಬದಲಿಸಿರುವ ಜರ್ಮನಿ, ಗಾಝಾದಲ್ಲಿ ಮಾನವೀಯ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಅಸಂಬದ್ಧ ಪ್ರಕ್ರಿಯೆ : ನಿಕರಾಗುವ
ಗಾಝಾದಲ್ಲಿನ ಫೆಲೆಸ್ತೀನಿಯನ್ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಒಂದು ಕಡೆ ಏರ್‍ಡ್ರಾಪ್(ವಿಮಾನದ ಮೂಲಕ) ಮಾನವೀಯ ನೆರವು ನೀಡುವುದು, ಮತ್ತೊಂದು ಕಡೆಯಿಂದ ಅವರನ್ನು ಕೊಲ್ಲಲು ಮತ್ತು ನಾಶಮಾಡಲು ಬಳಸುವ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳನ್ನು ಒದಗಿಸುವುದು ನಿಜಕ್ಕೂ ಅಸಂಬದ್ಧ ಮತ್ತು ಹಾಸ್ಯಾಸ್ಪದ ಪ್ರಕ್ರಿಯೆ' ಎಂದು ನಿಕರಾಗುವಾದ ನ್ಯಾಯವಾದಿ ಡೇನಿಯಲ್ ಮುಲ್ಲರ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ನಿಕರಾಗುವಾ ದಾಖಲಿಸಿರುವ ಪ್ರಕರಣ ಹಲವು ವರ್ಷಗಳ ಕಾಲ ಮುಂದುವರಿಯಬಹುದು. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧ 6 ತಿಂಗಳಿಂದ ಮುಂದುವರಿದಿದ್ದು ಇಸ್ರೇಲ್‍ಗೆ ತಕ್ಷಣ ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತಗೊಳಿಸಬೇಕೆಂಬ ಅಂತರಾಷ್ಟ್ರೀಯ ಸಮುದಾಯದ ಒತ್ತಾಯ ಹೆಚ್ಚಿದೆ.