ಕಳ್ಳತನ ಆರೋಪ: ಗರ್ಭಿಣಿಯನ್ನು ಗುಂಡಿಟ್ಟು ಕೊಂದ ಪೊಲೀಸರು
ವಾಷಿಂಗ್ಟನ್: ಅಂಗಡಿಯಿಂದ ಕೆಲವು ವಸ್ತುಗಳನ್ನು ಕಳವು ಮಾಡಿದ ಆರೋಪದಲ್ಲಿ 21 ವರ್ಷದ ಗರ್ಭಿಣಿ ಮಹಿಳೆಯೊಬ್ಬಳನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ಘಟನೆ ಅಮೆರಿಕದ ಓಹಿಯೊ ರಾಜ್ಯದಲ್ಲಿ ವರದಿಯಾಗಿದೆ.
ಕಳೆದ ವಾರ ಕೊಲಂಬಸ್ ನಗರದ ವೆಸ್ಟರ್‌ವಿಲ್ಲೆಯಲ್ಲಿನ ಕಿರಾಣಿ ಅಂಗಡಿಯಲ್ಲಿ ಟಾಕಿಯಾ ಯಂಗ್ ಎಂಬ ಗರ್ಭಿಣಿ ಯುವತಿ ವಸ್ತುಗಳನ್ನು ಖರೀದಿಸಿ ಹೊರಗಡೆ ಪಾರ್ಕ್ ಮಾಡಲಾಗಿದ್ದ ತನ್ನ ಕಾರಿನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಪೊಲೀಸರು ಆಕೆಯನ್ನು ತಡೆದಿದ್ದಾರೆ. ಆ ಮಹಿಳೆ ಅಂಗಡಿಯಿಂದ ಮದ್ಯದ ಬಾಟಲಿಗಳನ್ನು ಕದ್ದಿರುವುದಾಗಿ ಅಂಗಡಿಯವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆಗೆ ಮುಂದಾದಾಗ ಮಹಿಳೆ ಒಪ್ಪದೆ ವಾಗ್ವಾದ ನಡೆಸಿದ್ದಾಳೆ. ಬಳಿಕ ಪೊಲೀಸರ ಮೇಲೆಯೇ ಕಾರನ್ನು ಚಲಾಯಿಸಲು ನೋಡಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡು ಕಾರಿನೊಳಗಿದ್ದ ಮಹಿಳೆಗೆ ಬಡಿದು ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆದರೆ ಇದನ್ನು ನಿರಾಕರಿಸುವ ಮಹಿಳೆಯ ಕುಟುಂಬದವರು ‘ಇದೊಂದು ಅಧಿಕಾರ ಮತ್ತು ಬಲದ ದುರ್ಬಳಕೆಯಾಗಿದ್ದು ಕ್ರಿಮಿನಲ್ ಕೃತ್ಯವಾಗಿರುವುದರಿಂದ ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ' ಆಗ್ರಹಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.