ಪೂರ್ವ ಉಕ್ರೇನ್‍ನಲ್ಲಿ ರಶ್ಯ ಪಡೆಗಳ ಮುನ್ನಡೆ; 2 ಗ್ರಾಮಗಳು ವಶಕ್ಕೆ

Update: 2025-01-12 15:59 GMT

PC  : NDTV 

ಮಾಸ್ಕೋ: ಪೂರ್ವ ಉಕ್ರೇನ್‍ನಲ್ಲಿ ಕೆಲವು ತಿಂಗಳಿಂದ ಸ್ಥಿರವಾಗಿ ಮುನ್ನಡೆಯುತ್ತಿರುವ ತನ್ನ ಪಡೆಗಳು ಎರಡು ಗ್ರಾಮಗಳನ್ನು ವಶಪಡಿಸಿಕೊಂಡಿರುವುದಾಗಿ ರಶ್ಯ ರವಿವಾರ ಹೇಳಿದೆ.

ದಕ್ಷಿಣ ಕಮಾಂಡ್‍ನ ತುಕಡಿಗಳು ಪೂರ್ವ ಡೊನೆಟ್ಸ್ಕ್ ವಲಯದಲ್ಲಿ ಯಂತಾರ್ನ್ ಗ್ರಾಮವನ್ನು ವಶಕ್ಕೆ ಪಡೆದಿವೆ. ಇದು ಅತ್ಯಂತ ಆಯಕಟ್ಟಿನ ನಗರ ಕುರಾಖೋವ್‍ಗಿಂತ ಸುಮಾರು 10 ಕಿ.ಮೀ ದೂರದಲ್ಲಿರುವುದರಿಂದ ಮಹತ್ವದ ಮುನ್ನಡೆಯಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಶನಿವಾರ ಕುರಾಖೋವ್‍ನ ವಾಯವ್ಯದಲ್ಲಿರುವ ಮತ್ತೊಂದು ಗ್ರಾಮವನ್ನು ವಶಪಡಿಸಿಕೊಂಡಿರುವುದಾಗಿ ರಶ್ಯ ಹೇಳಿದೆ. ಜತೆಗೆ, ಈಶಾನ್ಯ ಖಾರ್ಕಿವ್ ಪ್ರದೇಶದ ಕಲಿನೋವ್ ಗ್ರಾಮವನ್ನು ವಶಪಡಿಸಿಕೊಳ್ಳಲಾಗಿದೆ. ಒಸ್ಕಿಲ್ ನದಿಯ ಪಶ್ಚಿಮ ದಂಡೆಯಲ್ಲಿರುವ ಈ ಗ್ರಾಮವು ಯುದ್ಧದ ಮುಂಚೂಣಿ ವಲಯದಲ್ಲಿ ಗುರುತಿಸಿಕೊಂಡಿತ್ತು ಎಂದು ರಶ್ಯ ಹೇಳಿದೆ. ಈ ನದಿಯನ್ನು ದಾಟಲು ಹಲವು ತಿಂಗಳುಗಳಿಂದ ರಶ್ಯ ಪಡೆ ಶತಪ್ರಯತ್ನ ನಡೆಸುತ್ತಿತ್ತು.

ರಶ್ಯದ ಪಡೆಗಳು ಒಸ್ಕಿಲ್ ನದಿಯನ್ನು ದಾಟಿಬಂದಿವೆ. ಆದರೆ ಅಲ್ಲಿಂದ ಮುಂದುವರಿಯಲು ನಮ್ಮ ಪಡೆಗಳು ಅವಕಾಶ ನೀಡುತ್ತಿಲ್ಲ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಶನಿವಾರ ಮತ್ತು ರವಿವಾರ ರಶ್ಯದ 60 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಡ್ರೋನ್‍ನ ಅವಶೇಷ ಕೆಳಗೆ ಬಿದ್ದಾಗ ಹಲವು ಮನೆಗಳು ಹಾನಿಗೊಂಡಿವೆ. ದಕ್ಷಿಣ ಖೆರ್ಸನ್ ಪ್ರದೇಶದಲ್ಲಿ ರವಿವಾರ ರಶ್ಯದ ಡ್ರೋನ್ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಸೇನೆ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News