ಇಸ್ರೇಲ್ ನಿಂದ ವೈಮಾನಿಕ ದಾಳಿ | ಇರಾನ್ ನ IRGC ಕಮಾಂಡರ್ ಮುಹಮ್ಮದ್ ರೆಝಾ ಝಹೇದಿ ಹತ್ಯೆ

Update: 2024-04-01 17:36 GMT

ಮುಹಮ್ಮದ್ ರೆಝಾ ಝಹೇದಿ | Photo : X \ @jacksonhinklle 

ಡಮಾಸ್ಕಸ್ : ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನಿನ ರಾಯಭಾರಿ ಕಚೇರಿಯನ್ನು ನೆಲಸಮ ಮಾಡಲಾಗಿದೆ. ದಾಳಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ನ ಹಿರಿಯ ಕಮಾಂಡರ್ ಮುಹಮ್ಮದ್ ರೆಝಾ ಝಹೇದಿಯವರನ್ನು ಹತ್ಯೆ ಮಾಡಲಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ರಾಯಿಟರ್ಸ್‌ನೊಂದಿಗೆ ಮಾತನಾಡಿದ ಲೆಬನಾನಿನ ಭದ್ರತಾ ಮೂಲವು, ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ನ ಹಿರಿಯ ಕಮಾಂಡರ್ ಮುಹಮ್ಮದ್ ರೆಝಾ ಝಹೇದಿ ಅವರು ಹತರಾಗಿರುವುದನ್ನು ಖಚಿತಪಡಿಸಿದೆ. ದಾಳಿಯಲ್ಲಿ ಇರಾನಿನ ರಾಜತಾಂತ್ರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಇರಾನ್ ದೇಶದ ದೂರದರ್ಶನ ಹೇಳಿದೆ.

ಸಿರಿಯಾದ ರಾಜಧಾನಿಯ ಮೆಝೆಹ್ ಜಿಲ್ಲೆಯ ಘಟನಾ ಸ್ಥಳದಲ್ಲಿ, ಚಪ್ಪಟೆಯಾದ ಕಟ್ಟಡದ ಅವಶೇಷಗಳಿಂದ ಆಗಸದೆತ್ತರಕ್ಕೆ ಹೊಗೆಯ ಬುಗ್ಗೆಗಳು ಕಂಡುಬಂದವು. ತುರ್ತು ಸೇವಾ ವಾಹನಗಳು ಕಟ್ಟಡದ ಹೊರಗಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಅವಶೇಷಗಳ ಮುಂದೆ ಕಂಬಕ್ಕೆ ಕಟ್ಟಿದ್ದ ಇರಾನಿನ ಧ್ವಜವು ನೇತಾಡುತ್ತಿತ್ತು. ಸಿರಿಯಾ ಮತ್ತು ಇರಾನ್ ವಿದೇಶಾಂಗ ಮಂತ್ರಿಗಳು ಘಟನಾ ಸ್ಥಳದಲ್ಲಿದ್ದರು ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಗಾಝಾ ಸಂಘರ್ಷದ ಆರು ತಿಂಗಳ ಯುದ್ಧದ ಸಮಯದಲ್ಲಿ ಇರಾನ್ ನೆಲೆಗಳ ಮೇಲೆ ಪದೇ ಪದೇ ದಾಳಿ ಮಾಡಿದ ಇಸ್ರೇಲ್, ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಇಸ್ರೇಲಿ ಮಿಲಿಟರಿ ವಕ್ತಾರರು "ವಿದೇಶಿ ಮಾಧ್ಯಮಗಳಲ್ಲಿನ ವರದಿಗಳ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ”, ಎಂದು ಹೇಳಿದ್ದಾರೆ.

ಇಸ್ರೇಲ್ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ. ಸಿರಿಯಾದ SANA ರಾಜ್ಯ ಸುದ್ದಿ ಸಂಸ್ಥೆಯು ಸಾವು ನೋವುಗಳ ನಿಖರ ಸಂಖ್ಯೆಯನ್ನು ತಿಳಿಸಿಲ್ಲ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News