ಗಾಝಾ: ಇಂಧನ ಖಾಲಿಯಾಗಿ ಕಾರ್ಯ ನಿಲ್ಲಿಸಿದ ಅಲ್ ಶಿಫಾ ಆಸ್ಪತ್ರೆ, ನವಜಾತ ಶಿಶು ಮೃತ್ಯು
ಗಾಝಾ: ಗಾಝಾ ನಗರದಲ್ಲಿಯ ಅತ್ಯಂತ ದೊಡ್ಡದಾದ ಅಲ್ ಶಿಫಾ ಆಸ್ಪತ್ರೆ ಸಂಕೀರ್ಣವು ಇಂಧನ ಖಾಲಿಯಾಗಿದ್ದರಿಂದ ಶನಿವಾರ ತನ್ನ ಕಾರ್ಯವನ್ನು ನಿಲ್ಲಿಸಿದೆ ಎಂದು ಗಾಝಾ ಆರೋಗ್ಯ ಸಚಿವಾಲಯವು ತಿಳಿಸಿದೆ. ಪರಿಣಾಮವಾಗಿ ಇನ್‌ಕ್ಯುಬೇಟರ್‌ನಲ್ಲಿ ಇರಿಸಲಾಗಿದ್ದ ೪೫ ನವಜಾತ ಶಿಶುಗಳ ಪೈಕಿ ಒಂದು ಮೃತಪಟ್ಟಿದೆ ಎಂದು ಹಮಾಸ್ ನಿಯಂತ್ರಿತ ಗಾಝಾದ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಖಿದ್ರಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಇಸ್ರೇಲ್ ಸೇನೆಯು ಇಡೀ ರಾತ್ರಿ ಗಾಝಾ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಹಮಾಸ್ ಹೋರಾಟಗಾರರೊಂದಿಗೆ ಕಾಳಗದಲ್ಲಿ ನಿರತವಾಗಿತ್ತು ಎಂದು ನಿವಾಸಿಗಳು ತಿಳಿಸಿದರು.
‘ಪರಿಸ್ಥಿತಿ ಯಾರೂ ಊಹಿಸಲಾಗದಷ್ಟು ಕೆಟ್ಟಿದೆ. ನಾವು ಇರುವ ಅಲ್ ಶಿಫಾ ಮೆಡಿಕಲ್ ಕಾಂಪ್ಲೆಕ್ಸ್‌ಗೆ ಮುತ್ತಿಗೆ ಹಾಕಲಾಗಿದೆ ಮತ್ತು ಇಸ್ರೇಲಿ ಸೇನೆಯು ಸಂಕೀರ್ಣದೊಳಗಿನ ಹೆಚ್ಚಿನ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿದೆ ’ ಎಂದು ಖಿದ್ರಾ ದೂರವಾಣಿ ಮೂಲಕ ತಿಳಿಸಿದರು.
ಹಮಾಸ್ ಅಲ್ ಶಿಫಾ ಆಸ್ಪತ್ರೆ ಮತ್ತು ಇತರ ಕಟ್ಟಡಗಳ ಕೆಳಗೆ ಕಮಾಂಡ್ ಸೆಂಟರ್‌ಗಳನ್ನು ಸ್ಥಾಪಿಸಿದ್ದಾರೆ, ಹೀಗಾಗಿ ಅವುಗಳನ್ನು ಮಿಲಿಟರಿ ಗುರಿಗಳೆಂದು ಪರಿಗಣಿಸಲಾಗುತ್ತಿದೆ ಎಂದು ಇಸ್ರೇಲಿ ಸೇನೆಯು ಹೇಳಿದೆ.
ನಾಗರಿಕರನ್ನು ಮಾನವ ಗುರಾಣಿಗಳನ್ನಾಗಿ ಬಳಸಲಾಗುತ್ತಿದೆ ಎನ್ನುವುದನ್ನು ಹಮಾಸ್ ನಿರಾಕರಿಸಿದೆ. ಆಸ್ಪತ್ರೆಗಳ ಮೇಲೆ ಅಥವಾ ಸಮೀಪದಲ್ಲಿ ಹೆಚ್ಚುತ್ತಿರುವ ಇಸ್ರೇಲಿ ದಾಳಿಗಳು ರೋಗಿಗಳು,ವೈದ್ಯಕೀಯ ಸಿಬ್ಬಂದಿ ಮತ್ತು ಅವುಗಳಲ್ಲಿ ಅಥವಾ ಸಮೀಪದ ಕಟ್ಟಡಗಳಲ್ಲಿ ಆಶ್ರಯ ಪಡೆದಿರುವ ಸಾವಿರಾರು ನಿರಾಶ್ರಿತರಿಗೆ ಅಪಾಯವನ್ನು ಒಡ್ಡಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
‘ಇಸ್ರೇಲಿ ಪಡೆಗಳು ಸಂಕೀರ್ಣದಲ್ಲಿ ಓಡಾಡುವ ಜನರ ಮೇಲೆ ಗುಂಡುಗಳನ್ನು ಹಾರಿಸುತ್ತಿವೆ,ಇದರಿಂದಾಗಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಹೋಗಲು ನಮಗೆ ಸಾಧ್ಯವಾಗುತ್ತಿಲ್ಲ. ಕೆಲವರು ಆಸ್ಪತ್ರೆಯನ್ನು ತೊರೆಯಲು ಪ್ರಯತ್ನಿಸಿದ್ದರು ಮತ್ತು ಅವರ ಮೇಲೆ ಗುಂಡುಗಳನ್ನು ಹಾರಿಸಲಾಗಿತ್ತು ’ ಎಂದು ಹೇಳಿದ ಖಿದ್ರಾ, ಇಲ್ಲಿ ವಿದ್ಯುತ್ ಪೂರೈಕೆ ಮತ್ತು ಇಂಟರ್ನೆಟ್ ಸ್ಥಗಿತಗೊಂಡಿದೆ ಎಂದು ತಿಳಿಸಿದರು.