ಚು.ಆಯೋಗದ ವಿರುದ್ಧ ನಿಂದನೆ ಆರೋಪ:ಇಮ್ರಾನ್ ಖಾನ್‌ಗೆ ಜಾಮೀನು ರಹಿತ ಬಂಧನ ವಾರಂಟ್ ಜಾರಿ
ಇಸ್ಲಾಮಾಬಾದ್: ತನ್ನ ವಿರುದ್ಧ ‘ನಿಂದನಾತ್ಮಕ ಹೇಳಿಕೆ’ಯನ್ನು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಚುನಾವಣಾ ಆಯೋಗವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಜಾಮೀನುರಹಿತ ಬಂಧನ ವಾರಂಟನ್ನು ಮಂಗಳವಾರ ಜಾರಿಗೊಳಿಸಿದೆ.
ಚುನಾವಣಾ ಆಯೋಗ ಹಾಗೂ ಅದರ ಮುಖ್ಯಚುನಾವಣಾ ಆಯುಕ್ತ (ಸಿಇಸಿ)ರ ವಿರುದ್ಧ ಅಸಭ್ಯವಾದ ಪದವನ್ನು ಬಳಸಿದ್ದಕ್ಕಾಗಿ ಪಾಕಿಸ್ತಾನ ತೆಹ್ರಿಕೆ ಇನ್ಸಾಫ್ (ಪಿಟಿಐ) ಪಕ್ಷದ ವರಿಷ್ಠ ಇಮ್ರಾನ್ ಖಾನ್ ಹಾಗೂ ಪಕ್ಷದ ಮಾಜಿ ನಾಯಕರಾದ ಚೌಧರಿ ಹಾಗೂ ಅಸಾದ್ ಉಮರ್ ಅವರ ವಿರುದ್ಧ ಪಾಕ್ ಚುನಾವಣಾ ಆಯೋಗವು ಕಳೆದ ವರ್ಷ ಮಾನಹಾನಿ ಕುರಿತ ಕಾನೂನುಕ್ರಮಗಳನ್ನು ಆರಂಭಿಸಿತ್ತು.
ಹಲವಾರು ಎಚ್ಚರಿಕೆಗಳ ಹೊರತಾಗಿಯೂ ಇಮ್ರಾನ್ ಖಾನ್ ಹಾಗೂ ಚೌಧುರಿ ತನ್ನ ಮುಂದೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಂಧನ ಆದೇಶವನ್ನು ನಾಲ್ಕು ಸದಸ್ಯರ ಪಾಕ್ ಚುನಾವಣಾ ಆಯೋಗದ ಮುಖ್ಯಸ್ಥ ನಿಸಾರ್ ದುರಾನಿ ಜಾರಿಗೊಳಿಸಿದ್ದಾರೆ.
ಆದರೆ ಇನ್ನೋರ್ವ ಆರೋಪಿ ಅಸಾದ್ ಉಮರ್ ಅವರ ವಕೀಲರು, ತನ್ನ ಕಕ್ಷಿದಾರನು ಇನ್ನೊಂದು ಪ್ರಕರಣದ ವಿಚಾರಣೆಗೆ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಹಾಜರಾಗಬೇಕಾಗಿರುವುದರಿಂದ ಅವರಿಗೆ ವಿನಾಯಿತಿ ನೀಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಉಮರ್ ಅವರಿಗೆ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿಲ್ಲ.
ಆದರೆ ಖಾನ್ ಹಾಗೂ ಚೌಧುರಿ ಅವರಿಗೆ ಜಾಮೀನುರಹಿತ ಬಂಧನ ವಾರಂಟ್ ಜಾರಿಗೊಳಿಸಿರುವ ಪಾಕ್ ಚುನಾವಣಾ ಆಯೋಗವು ಮುಂದಿನ ವಿಚಾರಣೆಯನ್ನು ಜುಲೈ 25ಕ್ಕೆ ನಿಗದಿಪಡಿಸಿದೆ.
ತನ್ನ ಮುಂದೆ ವೈಯಕ್ತಿಕವಾಗಿ ಅಥವಾ ನ್ಯಾಯವಾದಿಗಳ ಮೂಲಕ ಹಾಜರಾಗುವಂತೆ ಕೋರಿ ಪಾಕ್ ಚುನವಣಾ ಆಯೋಗವು ಈ ಇಬ್ಬರು ಪಿಟಿಐ ನಾಯಕರಿಗೆ ತಿಳಿಸಿತ್ತು. ಆದರೆ ಅವರು ಆಯೋಗದ ನೋಟಿಸನ್ನು ಪಾಕ್ ನ ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
00000000000000000000