ಇಸ್ರೇಲ್‌ಗೆ ಸದ್ದಿಲ್ಲದೆ 2.5 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಸಾಗಣೆ ಮಾಡಿದ ಅಮೆರಿಕ : ವರದಿ
ವಾಶಿಂಗ್ಟನ್ : ಇಸ್ರೇಲ್ – ಫೆಲೆಸ್ತೀನ್ ಮಧ್ಯೆ ಹೆಚ್ಚುತ್ತಿರುವ ಹಿಂಸಾಚಾರದ ನಡುವೆ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಜಾಗತಿಕವಾಗಿ ಕೂಗು ಹೆಚ್ಚುತ್ತಿರುವ ನಡುವೆಯೂ, ಬೈಡೆನ್ ಆಡಳಿತವು ಸದ್ದಿಲ್ಲದೇ ಇಸ್ರೇಲ್‌ಗೆ 2.5 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಸಾಗಣೆ ಅನುಮೋದಿಸಿರುವುದಕ್ಕೆ ಟೀಕೆಗಳನ್ನು ಎದುರಿಸಿದೆ.
ಶುಕ್ರವಾರದ ವಾಶಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ, ಆಡಳಿತವು 1,800 MK84 2,000-ಪೌಂಡ್ ಬಾಂಬ್‌ಗಳು ಮತ್ತು 500 MK82 500-ಪೌಂಡ್ ಬಾಂಬ್‌ಗಳು, ಹಾಗೆಯೇ ಅಂದಾಜು 2.5 ಶತಕೋಟಿ ಡಾಲರ್ ಮೌಲ್ಯದ ಮೌಲ್ಯದ 25 F-35A ಫೈಟರ್ ಜೆಟ್‌ಗಳು ಮತ್ತು ಇಂಜಿನ್‌ಗಳು ಸೇರಿದಂತೆ ಶಸ್ತ್ರಾಸ್ತ್ರ ಸಾಗಣೆಯನ್ನು "ಸದ್ದಿಲ್ಲದೆ" ಅಧಿಕೃತಗೊಳಿಸಿದೆ ಎನ್ನಲಾಗಿದೆ.
ಗಾಝಾದಲ್ಲಿ ಹಿಂದಿನ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ 2,000-ಪೌಂಡ್ ಬಾಂಬ್ ಗಳನ್ನು ಬಳಸಲಾಗಿತ್ತು. ಇದು ಗಮನಾರ್ಹ ಸಾವು ನೋವುಗಳಿಗೆ ಕಾರಣವಾಯಿತು ಎಂದು ಹೆಸರು ಹೇಳಲಿಚ್ಛಿಸಿದ ಅಮೆರಿಕ ಅಧಿಕಾರಿಯೊಬ್ಬರು ವಾಶಿಂಗ್ಟನ್ ಪೋಸ್ಟ್ ಗೆ ತಿಳಿಸಿದ್ದಾರೆ.
ಲೇಖಕಿ ತ್ರಿತಾ ಪಾರ್ಸಿ ಸೇರಿದಂತೆ ವಿಮರ್ಶಕರು ಬೈಡೆನ್ ಆಡಳಿತವು ಕದನ ವಿರಾಮದ ಕರೆಗಳನ್ನು ನಿರ್ಲಕ್ಷಿಸುತ್ತದೆ. ವಿಶ್ವ ಸಂಸ್ಥೆಯ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಬದಲು ಈಗ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ನಡೆಯುತ್ತಿರುವ ಹಿಂಸಾಚಾರದ ಜ್ವಾಲೆಗೆ ತುಪ್ಪ ಸುರಿಯುವ ಕೆಲಸ ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದಂತೆ ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ದಾಳಿಯ ನಂತರ ಬೈಡೆನ್ ಆಡಳಿತವು ಅಧಿಕೃತವಾಗಿ 100 ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಸರಕುಗಳನ್ನು ಸಾಗಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಫೆಲಿಸ್ತೀನ್ ಮೂಲದ ಅಮೆರಿಕದ ಬರಹಗಾರ ಯೂಸೆಫ್ ಮುನಯ್ಯರ್ ಸದ್ದಿಲ್ಲದೇ ಶಸ್ತ್ರಾಸ್ತ್ರ ಸಾಗಿಸುತ್ತಿರುವ ಆಡಳಿತದ ವಿಧಾನವನ್ನು ಟೀಕಿಸಿದರು. ಇದು ಹೇಡಿತನದ ಪರಮಾವಧಿ ಎಂದರು.
ಕೌನ್ಸಿಲ್ ಆನ್ ಅಮೇರಿಕನ್ ಇಸ್ಲಾಮಿಕ್ ರಿಲೇಶನ್ಸ್‌ನ ಎಡ್ವರ್ಡ್ ಅಹ್ಮದ್ ಮಿಚೆಲ್ ಈ ನಿರ್ಧಾರವನ್ನು ಖಂಡಿಸಿದ್ದಾರೆ. ಇದು ನಂಬಲಾಗದ ಕೃತ್ಯ. ಈ ಮೂಲಕ ಬೈಡೆನ್ ಆಡಳಿತವು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಆಡಳಿತವನ್ನು ಬೆಂಬಲಿಸುತ್ತಿದೆ ಎಂದು ಅವರು ಆರೋಪಿಸಿದರು.
ಇಸ್ರೇಲ್ ಗಾಝಾದಲ್ಲಿ ನರಮೇಧದ ಆರೋಪವನ್ನು ಎದುರಿಸುತ್ತಿದೆ. ಅಂತರರಾಷ್ಟ್ರೀಯ ನ್ಯಾಯಾಲಯವು ಜನವರಿಯಲ್ಲಿ ನರಹಂತಕ ಕೃತ್ಯಗಳನ್ನು ತಡೆಯಲು ಆದೇಶವನ್ನು ಹೊರಡಿಸಿತು. ಇದರ ಹೊರತಾಗಿಯೂ, ಫೆಲೆಸ್ತೀನಿನ ಜನರಿಗೆ ಆಹಾರ ಸಾಮಾಗ್ರಿಗಳ ಸಾಗಾಟ ತಡೆ ಹಿಡಿಯುವ ಮೂಲಕ ಬಲವಂತದ ಹಸಿವು ಸೇರಿದಂತೆ ಅನೇಕ ನಡೆಯುತ್ತಿರುವ ದೌರ್ಜನ್ಯಗಳು ಮುಂದುವರಿದಿವೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಇತ್ತೀಚಿಗೆ ನ್ಯಾಯಾಲಯವು, ಗಾಝಾಕ್ಕೆ ಇಸ್ರೇಲ್ ನಿಂದ ತುರ್ತಾಗಿ ಅಗತ್ಯವಿರುವ ಮಾನವೀಯ ನೆರವನ್ನು ಅನುಮತಿಸಬೇಕೆಂದು ಒತ್ತಾಯಿಸಿ ಮತ್ತೊಂದು ಆದೇಶವನ್ನು ನೀಡಿತು.