ಲೆಬನಾನ್ ಮೇಲೆ ದಾಳಿಯಾದರೆ ವಿನಾಶಕಾರಿ ಯುದ್ಧದ ಆರಂಭ : ಇಸ್ರೇಲ್‍ಗೆ ಇರಾನ್ ಎಚ್ಚರಿಕೆ

Update: 2024-06-29 15:13 GMT

PC : aljazeera.com

ವಿಶ್ವಸಂಸ್ಥೆ: ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ಲೆಬನಾನ್‍ನಲ್ಲಿ ಪೂರ್ಣ ಪ್ರಮಾಣದ ಮಿಲಿಟರಿ ಆಕ್ರಮಣವನ್ನು ನಡೆಸಿದರೆ ವಿನಾಶಕಾರಿ ಯುದ್ಧ ಸಂಭವಿಸಲಿದೆ ಎಂದು ಇರಾನ್ ಶನಿವಾರ ಎಚ್ಚರಿಕೆ ನೀಡಿದೆ.

ಒಂದು ವೇಳೆ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದರೆ ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳ ಗುಂಪು `ಪ್ರತಿರೋಧ ಪಡೆ' ಇಸ್ರೇಲ್ ಅನ್ನು ಎದುರಿಸಲಿದೆ ಎಂದು ವಿಶ್ವಸಂಸ್ಥೆಗೆ ಇರಾನ್‍ನ ನಿಯೋಗ ಹೇಳಿದೆ. ಉತ್ತರ ಇಸ್ರೇಲ್‍ನಲ್ಲಿ ಸೇನಾ ನೆಲೆಗಳ ಮೇಲೆ ಹಿಜ್ಬುಲ್ಲಾ ಪಡೆಯ ಕ್ಷಿಪಣಿ ಸುರಿಮಳೆಗೆ ಉತ್ತರವಾಗಿ ಇಸ್ರೇಲ್‍ನ ಭದ್ರತಾ ಪಡೆ ಹಿಜ್ಬುಲ್ಲಾಗಳ ಹಲವು ಪ್ರಮುಖ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ ಬಳಿಕ ಇರಾನ್ ಈ ಎಚ್ಚರಿಕೆ ರವಾನಿಸಿದೆ.

ಹಿಜ್ಬುಲ್ಲಾ ಮೇಲೆ ಇಸ್ರೇಲ್ ಯುದ್ಧ ಆರಂಭಿಸಿದರೆ ಪ್ರತಿರೋಧ ಪಡೆಯ ಸಂಪೂರ್ಣ ಪಾಲ್ಗೊಳ್ಳುವಿಕೆ ಸೇರಿದಂತೆ ಎಲ್ಲಾ ಆಯ್ಕೆಗಳು ನಮ್ಮ ಮುಂದಿವೆ ಎಂದು ಇರಾನ್ ನಿಯೋಗ `ಎಕ್ಸ್' (ಟ್ವೀಟ್) ಮಾಡಿದೆ. ಹಿಜ್ಬುಲ್ಲಾ, ಹಮಾಸ್, ಯೆಮನ್‍ನ ಹೌದಿಗಳು, ಸಿರಿಯಾ ಮತ್ತು ಇರಾಕ್‍ನಲ್ಲಿರುವ ಇತರ ಗುಂಪುಗಳು ಇರಾನ್‍ನ `ಪ್ರತಿರೋಧ ಪಡೆ'ಯಲ್ಲಿವೆ.

ಸಿರಿಯಾದ ದಮಾಸ್ಕಸ್‍ನಲ್ಲಿರುವ ಇರಾನ್ ರಾಯಭಾರಿ ಕಚೇರಿಯ ಬಳಿ ನಡೆದಿದ್ದ ವೈಮಾನಿಕ ದಾಳಿಯಲ್ಲಿ ಇರಾನ್‍ನ ಐಆರ್‍ಜಿಸಿ ಪಡೆಯ ಹಲವು ಉನ್ನತ ಅಧಿಕಾರಿಗಳು ಮೃತಪಟ್ಟಿದ್ದರು. ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ದೂರಿದ್ದ ಇರಾನ್ ಇದಕ್ಕೆ ಪ್ರತಿಯಾಗಿ ಎಪ್ರಿಲ್ 14ರಂದು ಇಸ್ರೇಲ್ ಮೇಲೆ ಕ್ಷಿಪಣಿ ಮತ್ತು ಡ್ರೋನ್‍ಗಳ ಮಳೆಗರೆದಿತ್ತು. ಅಕ್ಟೋಬರ್ 7ರ ಹಮಾಸ್ ದಾಳಿಯ ನಂತರ ಶೀಘ್ರದಲ್ಲೇ ಹಿಜ್ಬುಲ್ಲಾಗಳ ದಾಳಿಯ ಭೀತಿಯಲ್ಲಿ ಉತ್ತರದ ಗಡಿಪ್ರದೇಶದ ಬಳಿಯಿಂದ ಇಸ್ರೇಲ್ ಸುಮಾರು 60,000 ನಿವಾಸಿಗಳನ್ನು ತೆರವುಗೊಳಿಸಿದೆ. ಲಿಟಾನಿ ನದಿಯ ಆಚೆಗೆ(2006ರ ಇಸ್ರೇಲ್-ಹಿಜ್ಬುಲ್ಲಾ ಯುದ್ಧವನ್ನು ಅಂತ್ಯಗೊಳಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದ ಪ್ರಕಾರ ಇಸ್ರೇಲ್‍ನ ಗಡಿಯ 30 ಕಿ.ಮೀ ಉತ್ತರ) ಹಿಜ್ಬುಲ್ಲಾ ಗುಂಪನ್ನು ಹಿಂದಕ್ಕೆ ಸರಿಸಲು ಅಮೆರಿಕ ನೇತೃತ್ವದಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಇದುವರೆಗೂ ವಿಫಲವಾಗಿವೆ.

ಈ ಮಧ್ಯೆ, ಯುದ್ಧದ ಅಪಾಯ ಈಗ ಈ ಹಿಂದಿಗಿಂತಲೂ ಹೆಚ್ಚಿದೆ. ಯಾವುದೇ ಕಡೆಯಿಂದ ಒಂದು ಪ್ರಮುಖ ದಾಳಿಯಾದರೂ ಯುದ್ಧದ ಕಿಡಿಯನ್ನು ಹೊತ್ತಿಸಬಹುದು. ಇದು ಯಾವುದೇ ಕ್ಷಣದಲ್ಲೂ ಸಂಭವಿಸಬಹುದು ಎಂದು ಅಮೆರಿಕದ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿರುವುದಾಗಿ `ಪೊಲಿಟಿಕೊ' ಸುದ್ದಿಸಂಸ್ಥೆ ವರದಿ ಮಾಡಿದೆ. `ಹಿಜ್ಬುಲ್ಲಾದ ಮೇಲೆ ಪೂರ್ಣಪ್ರಮಾಣದ ಯುದ್ಧ ಆರಂಭಿಸಿದರೆ ಹಿಜ್ಬುಲ್ಲಾದ ಶಸ್ತ್ರಾಸ್ತ್ರಗಳ ಏಟಿನಿಂದ ತಪ್ಪಿಸಿಕೊಳ್ಳಲು ಇಸ್ರೇಲ್‍ಗೆ ಅವಕಾಶವೇ ಇಲ್ಲದಂತಾಗುತ್ತದೆ ಮತ್ತು ನಾವು ನಿಯಮ ಅಥವಾ ಮಿತಿಯ ಗೊಡವೆಗೆ ಹೋಗದೆ ಹೋರಾಡುತ್ತೇವೆ' ಎಂದು ಹಿಜ್ಬುಲ್ಲಾ ಮುಖಂಡ ಹಸನ್ ನಸ್ರಲ್ಲಾ ಹೇಳಿದ್ದಾರೆ. ಇಸ್ರೇಲ್‍ನ ಮಿಲಿಟರಿ ಉದ್ದೇಶಕ್ಕೆ ತನ್ನ ಭೂಪ್ರದೇಶವನ್ನು ಬಳಸಲು ಅವಕಾಶ ಮಾಡಿಕೊಟ್ಟಿರುವ ಸೈಪ್ರಸ್‍ಗೂ ಎಚ್ಚರಿಕೆ ನೀಡಿರುವ ಹಿಜ್ಬುಲ್ಲಾ, ಮೆಡಿಟರೇನಿಯನ್‍ನಲ್ಲಿ ತನಗೆ ಏನು ಕಾದಿದಿ ಎಂದು ಇಸ್ರೇಲ್‍ಗೂ ತಿಳಿದಿದೆ ಎಂದಿದೆ.

ಹಮಾಸ್‍ಗೆ ನಮ್ಮ ಬೆಂಬಲ ಮುಂದುವರಿಯುತ್ತದೆ ಮತ್ತು ಎಲ್ಲದಕ್ಕೂ ನಾವು ಸಿದ್ಧ. ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಗಾಝಾದಲ್ಲಿ ಸಂಪೂರ್ಣ ಮತ್ತು ಶಾಶ್ವತ ಕದನವಿರಾಮ' ಎಂದು ಹಸನ್ ನಸ್ರಲ್ಲಾ ಹೇಳಿದ್ದಾರೆ. ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಕ್ಕೆ ನಮ್ಮ ಆದ್ಯತೆಯಿದೆ. ಒಂದು ವೇಳೆ ಯುದ್ಧ ಅನಿವಾರ್ಯವಾದರೆ ನಾವು ಸನ್ನದ್ಧರಾಗಿದ್ದೇವೆ ಎಂದು ಇಸ್ರೇಲ್‍ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹೇಳಿದ್ದಾರೆ.

ಮಧ್ಯಪ್ರಾಚ್ಯ ಸ್ವಾಧೀನಕ್ಕೆ ಇರಾನ್ ಯೋಜನೆ: ನೆತನ್ಯಾಹು

ಜೋರ್ಡಾನ್ ಮತ್ತು ಸೌದಿ ಅರೆಬಿಯಾದಂತಹ ಮಧ್ಯಪ್ರಾಚ್ಯದ ಆಡಳಿತಗಳನ್ನು ಬುಡಮೇಲುಗೊಳಿಸಲು ಇರಾನ್ ಉದ್ದೇಶಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ.

ಟೆಲ್‍ಅವೀವ್‍ಗೆ ಭೇಟಿ ನೀಡಿರುವ ಅಮೆರಿಕದ ಮಾಜಿ ಸೇನಾ ಕಮಾಂಡರ್‍ರ ಜತೆಗಿನ ಸಭೆಯಲ್ಲಿ ಮಾತನಾಡಿದ ನೆತನ್ಯಾಹು `ಇರಾನ್‍ನ ಈ ಪಿತೂರಿಯನ್ನು ವಿಫಲಗೊಳಿಸುವ ಪ್ರಥಮ ಕೆಲಸವೆಂದರೆ ಹಮಾಸ್ ಅನ್ನು ಸೋಲಿಸುವುದು. ತನ್ನ ಪ್ರಾದೇಶಿಕ ನೆರೆಯವರನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಇರಾನ್, ಈಗ ನಡೆಯುತ್ತಿರುವ `ಏಳು ಮುಂಚೂಣಿ' ಸಂಘರ್ಷವನ್ನು ನಿರ್ವಹಿಸುತ್ತಿದೆ ಎಂದು ನೆತನ್ಯಾಹು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News