ಗಾಝಾ ಯುದ್ಧಕ್ಕೆ ಸಂಬಂಧಿಸಿದಂತೆ ನೆತನ್ಯಾಹು ಕ್ರಮಗಳು ಇಸ್ರೇಲನ್ನು ಘಾಸಿಗೊಳಿಸುತ್ತಿದೆ: ಜೋ ಬೈಡನ್
ವಾಷಿಂಗ್ಟನ್: ಗಾಝಾ ಯುದ್ಧಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕ್ರಮಗಳು ಇಸ್ರೇಲಿಗೆ ನೆರವಾಗುವ ಬದಲಾಗಿ ಇಸ್ರೇಲನ್ನೇ ಘಾಸಿಗೊಳಿಸುತ್ತಿವೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಶನಿವಾರ ಪ್ರಸಾರವಾದ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ನಾಯಕತ್ವದ ಬಗ್ಗೆ ಅಮೆರಿಕದ ಮುಖಂಡರ ಅಸಹನೆ ಹೆಚ್ಚುತ್ತಿರುವುದರ ಪ್ರತೀಕ ಇದಾಗಿದೆ.
ಗಾಝಾದಲ್ಲಿ ಮಾನವೀಯ ಸಂಘರ್ಷ ಹೆಚ್ಚುತ್ತಿದ್ದು, ಅಮೆರಿಕದ ಮೇಲಿನ ಒತ್ತಡವೂ ಹೆಚ್ಚುತ್ತಿದೆ. ದಕ್ಷಿಣ ಗಾಝಾದ ರಫಾ ಮೇಲೆ ದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ನೆತನ್ಯಾಹು ಅವರಿಗೆ ಇಸ್ರೇಲ್ ದೇಶವನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕೂ ಇದೆ. ಆದರೆ ಕ್ರಮ ಕೈಗೊಂಡ ಪರಿಣಾಮ ಜೀವ ಕಳೆದುಕೊಂಡ ಅಮಾಯಕ ಜೀವಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
"ನನ್ನ ಪ್ರಕಾರ ಅವರ ಕ್ರಮಗಳು ಇಸ್ರೇಲ್‍ಗೆ ನೆರವಾಗುವ ಬದಲು ಇಸ್ರೇಲ್‍ಗೆ ಘಾಸಿಯಾಗುತ್ತಿವೆ" ಎಂದು ಹೇಳಿದರು.