ಮಾನಸಿಕ ಸಮಸ್ಯೆಗಳ ಚಿಕಿತ್ಸೆಗೆ MDMA, ಮ್ಯಾಜಿಕ್ ಮಶ್ರೂಮ್ ಬಳಕೆಯನ್ನು ಕಾನೂನುಬದ್ಧಗೊಳಿಸಿದ ಆಸ್ಟ್ರೇಲಿಯಾ
ಪಾರ್ಟಿ ಡ್ರಗ್ಸ್ ಎಕ್ಸ್‌ಟೆಸಿ ಎಂದೂ ಕರೆಯಲ್ಪಡುವ ಎಂಡಿಎಂಎ ಸಿಂಥೆಟಿಕ್ ಡ್ರಗ್ ಅನ್ನು ಕೆಲವೊಂದು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನೀಡುವ ಚಿಕಿತ್ಸೆಗೆ ಬಳಸಲು ಕಾನೂನುಬದ್ಧಗೊಳಿಸಿದ ವಿಶ್ವದ ಮೊದಲ ದೇಶ ಆಸ್ಟ್ರೇಲಿಯಾ ಆಗಿದೆ.
ಸಿಡ್ನಿ: ಪಾರ್ಟಿ ಡ್ರಗ್ಸ್ ಎಕ್ಸ್‌ಟೆಸಿ ಎಂದೂ ಕರೆಯಲ್ಪಡುವ ಎಂಡಿಎಂಎ ಸಿಂಥೆಟಿಕ್ ಡ್ರಗ್ ಅನ್ನು ಕೆಲವೊಂದು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನೀಡುವ ಚಿಕಿತ್ಸೆಗೆ ಬಳಸಲು ಕಾನೂನುಬದ್ಧಗೊಳಿಸಿದ ವಿಶ್ವದ ಮೊದಲ ದೇಶ ಆಸ್ಟ್ರೇಲಿಯಾ ಆಗಿದೆ.
ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ನಿಂದ ಬಳಲುವ ಜನರಿಗೆ ಈ ಎಂಡಿಎಂಎ ಬಳಸಿ ಚಿಕಿತ್ಸೆ ನೀಡಲು ಮಾನಸಿಕ ರೋಗ ತಜ್ಞರಿಗೆ ಈಗ ಆಸ್ಟ್ರೇಲಿಯಾದಲ್ಲಿ ಅವಕಾಶವಿದೆ. ಅದೇ ರೀತಿ ಕೆಲವೊಂದು ವಿಧದ ಖಿನ್ನತೆಗಳಿಗೆ ಮ್ಯಾಜಿಕ್ ಮಶ್ರೂಮ್‌ಗಳ ಬಳಕೆಗೂ ಅಲ್ಲಿ ಅನುಮತಿಸಲಾಗಿದೆ.
ಆಸ್ಟ್ರೇಲಿಯಾ ಸರ್ಕಾರದ ಈ ವಿವಾದಾತ್ಮಕ ಕ್ರಮವನ್ನು ವಿಜ್ಞಾನಿಗಳು ಮತ್ತು ಮಾನಸಿಕ ಆರೋಗ್ಯ ತಜ್ಞರು ಸ್ವಾಗತಿಸಿದ್ದರೂ ಇದೊಂದು ಆತುರದ ನಿರ್ಧಾರ ಎಂದು ಕೆಲವರು ಭಾವಿಸಿದ್ದಾರೆ. ಅದೇ ಸಮಯ ಈ ಥೆರಪಿಗಳಿಗೆ ಒಳಗಾಗುವ ಜನರು ಒಂದು ಕೋರ್ಸ್ ಚಿಕಿತ್ಸೆಗೆ ಸಾವಿರಾರು ಡಾಲರ್ ವೆಚ್ಚ ಮಾಡಬೇಕಿದೆ.
ಎಂಡಿಎಂಎ ಒಂದು ಸಿಂಥೆಟಿಕ್ ಡ್ರಗ್ ಆಗಿದ್ದು ಅದು ಹಾಲ್ಯುಸಿನೋಜೆನಿಕ್ ಪರಿಣಾಮಗಳಿಗೆ ಕಾರಣವಾಗುತ್ತದೆ ಮತ್ತು ಆರೋಗ್ಯಕ್ಕೆ ಹಲವಾರು ದುಷ್ಪರಿಣಾಮಗಳಿವೆ. ಅದೇ ಸಮಯ ಮ್ಯಾಜಿಕ್ ಮಶ್ರೂಮ್‌ಗಳೂ ಇದೇ ಪರಿಣಾಮ ಬೀರುತ್ತವೆ ಹಾಗೂ ಅವುಗಳಲ್ಲಿ ಆಕ್ಟಿವ್ ಕಂಪೌಂಡ್ ಪ್ಸಿಲೊಸೈಬಿನ್ ಅಂಶಗಳು ಇದೆ.
ಆದರೆ ಇವುಗಳ ಚಿಕಿತ್ಸೆಗೆ ಒಳಗಾಗುವ ರೋಗಿಗಳನ್ನು ಎಚ್ಚರಿಕೆಯಿಂದ ನಿಗಾ ವಹಿಸಬೇಕಿದೆ ಎಂದು ಕೆಲ ಮಾನಸಿಕ ಆರೋಗ್ಯ ಸಂಶೋಧಕರು ತಿಳಿಸುತ್ತಾರೆ.
ಐದರಿಂದ ಎಂಟು ವಾರಗಳ ಅವಧಿಯಲ್ಲಿ ರೋಗಿಗಳಿಗೆ ಮೂರು ಬಾರಿ ಚಿಕಿತ್ಸೆ ನೀಡಲಾಗುವುದು ಹಾಗೂ ಪ್ರತಿ ಚಿಕಿತ್ಸೆ ಎಂಟು ಗಂಟೆಗಳ ಕಾಲ ಮುಂದುವರಿಯಲಿದ್ದು ಈ ಸಂದರ್ಭ ವೈದ್ಯರು ಸಂಪೂರ್ಣವಾಗಿ ರೋಗಿಯ ಜೊತೆಗೆ ಇರಲಿದ್ದಾರೆ ಎಂಬ ಮಾಹಿತಿಯಿದೆ.