ರಶ್ಯದ ಇಬ್ಬರು ರಾಜತಾಂತ್ರಿಕರನ್ನು ಉಚ್ಛಾಟಿಸಿದ ಆಸ್ಟ್ರಿಯಾ
ವಿಯೆನ್ನಾ: ತಮ್ಮ ರಾಜತಾಂತ್ರಿಕ ಸ್ಥಾನಮಾನಕ್ಕೆ ಯೋಗ್ಯವಲ್ಲದ ಕಾರ್ಯದಲ್ಲಿ ತೊಡಗಿದ್ದ ರಶ್ಯದ ಇಬ್ಬರು ರಾಜತಾಂತ್ರಿಕರನ್ನು ಉಚ್ಛಾಟಿಸಲಾಗಿದ್ದು ಒಂದು ವಾರದೊಳಗೆ ದೇಶ ಬಿಟ್ಟು ತೆರಳಲು ಸೂಚಿಸಲಾಗಿದೆ ಎಂದು ಆಸ್ಟ್ರಿಯಾದ ವಿದೇಶಾಂಗ ಇಲಾಖೆ ಹೇಳಿದೆ.
ಈ ಹಿಂದಿನ ಕ್ರಮಗಳಿಗೆ ಗೂಢಚಾರಿಕೆ ಕೃತ್ಯ ಕಾರಣವಾಗಿತ್ತು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಆದರೆ ಈ ಬಾರಿಯ ಉಚ್ಛಾಟನೆಗೆ ಕಾರಣವನ್ನು ಸ್ಪಷ್ಟಪಡಿಸಿಲ್ಲ. ಉಚ್ಛಾಟಿತ ರಾಜತಾಂತ್ರಿಕರು ಮಾರ್ಚ್ 19ರೊಳಗೆ ದೇಶಬಿಟ್ಟು ತೆರಳುವಂತೆ ಸೂಚಿಸಲಾಗಿದೆ. ಆಸ್ಟ್ರಿಯಾ ಸರಕಾರದ ಅಧಿಕೃತ ಹೇಳಿಕೆ ಹೊರಬೀಳುವ ಮುನ್ನವೇ ಪ್ರತಿಕ್ರಿಯಿಸಿದ್ದ ರಶ್ಯದ ವಿದೇಶಾಂಗ ಇಲಾಖೆ `ಆಸ್ಟ್ರಿಯಾ ಸರಕಾರದ ಆರೋಪ ಆಧಾರ ರಹಿತವಾಗಿದ್ದು ರಶ್ಯ ಸೂಕ್ತ ಪ್ರತಿಕ್ರಮ ಕೈಗೊಳ್ಳಲಿದೆ' ಎಂದಿದ್ದರು. ಈ ಹಿಂದೆಯೂ ತನ್ನ ರಾಜತಾಂತ್ರಿಕರನ್ನು ಆಸ್ಟ್ರಿಯಾ ಉಚ್ಛಾಟಿಸಿದ್ದಕ್ಕೆ ಪ್ರತಿಯಾಗಿ ರಶ್ಯವು ಆಸ್ಟ್ರಿಯಾದ ರಾಜತಾಂತ್ರಿಕರನ್ನು ಉಚ್ಛಾಟಿಸಿತ್ತು.
ಇಂಟರ್ ನ್ಯಾಷನಲ್ ಅಟೊಮಿಕ್ ಎನರ್ಜಿ ಏಜೆನ್ಸಿ ಸೇರಿದಂತೆ ವಿಶ್ವಸಂಸ್ಥೆಯ ಸಹಸಂಸ್ಥೆಗಳು, ಆರ್ಗನೈಸೇಷನ್ ಫಾರ್ ಸೆಕ್ಯುರಿಟಿ ಆ್ಯಂಡ್ ಕೋ ಆಪರೇಷನ್ ಇನ್ ಯುರೋಪ್(ಒಎಸ್‍ಸಿಇ) ಮುಂತಾದ ಪ್ರತಿಷ್ಟಿತ ಅಂತರಾಷ್ಟ್ರಿಯ ಸಂಸ್ಥೆಗಳ ಕಚೇರಿಯನ್ನು ಹೊಂದಿರುವ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಪ್ರಮುಖ ರಾಜತಾಂತ್ರಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ರಶ್ಯ, ಅಮೆರಿಕದಂತಹ ದೊಡ್ಡ ದೇಶಗಳು ಆಸ್ಟ್ರಿಯಾಕ್ಕೆ ರಾಯಭಾರಿಯ ಜತೆಗೆ ವಿಶ್ವಸಂಸ್ಥೆ ಸಂಘಟನೆಗಳು, ಒಎಸ್‍ಸಿಇಗೆ ಪ್ರತ್ಯೇಕ ರಾಯಭಾರಿಯನ್ನು ನೇಮಿಸಿವೆ. ಈ ರೀತಿ ಹಲವು ರಾಜತಾಂತ್ರಿಕರನ್ನು ನೇಮಿಸುವ ಅವಕಾಶವು ರಾಜತಾಂತ್ರಿಕ ಸಿಬಂದಿಗಳ ಹೆಸರಲ್ಲಿ ಗುಪ್ತಚರ ಏಜೆಂಟರನ್ನು ನೇಮಿಸಲು ಅನುವು ಮಾಡಿಕೊಟ್ಟಿರುವುದರಿಂದ ವಿಯೆನ್ನಾ ` ಗೂಢಚಾರರ ಗುಹೆ' ಎನಿಸಿಕೊಂಡಿದೆ.