ಬಾಂಗ್ಲಾದೇಶ : ಪ್ಯಾಸೆಂಜರ್ ರೈಲಿಗೆ ಢಿಕ್ಕಿ ಹೊಡೆದ ಸರಕು ರೈಲು; ಕನಿಷ್ಠ 20 ಮಂದಿ ಸಾವು, ಹಲವರಿಗೆ ಗಾಯ
ಢಾಕಾ: ಕಿಶೋರ್‌ಗಂಜ್‌ನಿಂದ ಢಾಕಾಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿಗೆ ಸರಕು ಸಾಗಣೆ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಕನಿಷ್ಠ 20 ಮಂದಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ವರದಿಯಾಗಿದೆ.
ರಾಜಧಾನಿ ಢಾಕಾದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಕಿಶೋರಗಂಜ್ ಜಿಲ್ಲೆಯ ಭೈರಬ್ ಪ್ರದೇಶದಲ್ಲಿ ಮಧ್ಯಾಹ್ನ 3.30 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಢಾಕಾಕ್ಕೆ ಹೋಗುವ ಎಗರೋಸಿಂದೂರ್ ಗೋಧೂಲಿ ಎಕ್ಸ್‌ಪ್ರೆಸ್‌ನ ಹಿಂಭಾಗದ ಕೋಚ್‌ಗಳಿಗೆ, ಚಟ್ಟೋಗ್ರಾಮ್ ಕಡೆಗೆ ಸಾಗುತ್ತಿದ್ದ ಸರಕು ಸಾಗಣೆ ರೈಲು ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ ಎಂದು, ಅಲ್ಲಿನ ಅಧಿಕಾರಿ ಸಿರಾಜುಲ್ ಇಸ್ಲಾಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಇಲ್ಲಿಯವರೆಗೆ ಇಪ್ಪತ್ತು ಶವಗಳನ್ನು ಗುರುತಿಸಲಾಗಿದೆ. ನಾವು ರಕ್ಷಣಾ ಕಾರ್ಯಾಚರಣೆಗಳಿಗೆ ಸಾಧ್ಯವಿರುವ ಎಲ್ಲ ಕೆಲಸ ಮಾಡುತ್ತಿದ್ದೇವೆ” ಎಂದು ಅಪರಾಧ ವಿರೋಧಿ ರಾಪಿಡ್ ಆಕ್ಷನ್ ಬೆಟಾಲಿಯನ್‌ನ ಮುಖ್ಯ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಸ್ಥಳದಲ್ಲಿದ್ದ ಅಗ್ನಿಶಾಮಕ ದಳದ ಅಧಿಕಾರಿಗಳು ಮೂರು ಪ್ರಯಾಣಿಕರ ಬೋಗಿಗಳನ್ನು ಮೇಲಕ್ಕೆತ್ತಿದ್ದಾರೆ. ಸುಮಾರು 100 ಗಾಯಗಳನ್ನು ರಕ್ಷಿಸಿ ವಿವಿಧ ಆರೋಗ್ಯ ಕೇಂದ್ರಗಳಿಗೆ ರವಾನಿಸಲಾಗಿದೆ. ಹಳಿ ತಪ್ಪಿರುವ ಬೋಗಿಗಳ ಅಡಿಯಲ್ಲಿ ಅನೇಕ ಜನರು ಸಿಲುಕಿಕೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕ್ರೇನ್‌ಗಳೊಂದಿಗೆ ರಕ್ಷಣಾ ರೈಲು ಅಪಘಾತ ಸ್ಥಳಕ್ಕೆ ತೆರಳಿದೆ.
ಬಾಂಗ್ಲಾದೇಶ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಮಾಧ್ಯಮ ಮುಖ್ಯಸ್ಥ ಷಹಜಹಾನ್ ಸಿಕ್ದರ್ ಮಾತನಾಡಿ, “ಅಗ್ನಿಶಾಮಕ ಸೇವೆಯ ಹನ್ನೆರಡು ಘಟಕಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಪ್ರಾಥಮಿಕ ವರದಿಯ ಪ್ರಕಾರ ಸರಕು ರೈಲು ಹಿಂದಿನಿಂದ ಎಗಾರೊ ಸಿಂದೂರ್‌ಗೆ ಡಿಕ್ಕಿ ಹೊಡೆದು ಎರಡು ಬೋಗಿಗಳಿಗೆ ಬಡಿದಿದೆ" ಎಂದು ಢಾಕಾ ರೈಲ್ವೇ ಪೊಲೀಸ್ ಅಧೀಕ್ಷಕ ಅನೋವರ್ ಹೊಸೈನ್ ಹೇಳಿದ್ದಾರೆ ಎಂದು bdnews24 ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.