ಬಾಂಗ್ಲಾದಲ್ಲಿ ರವಿವಾರ ಸಾರ್ವತ್ರಿಕ ಚುನಾವಣೆ; 48 ಗಂಟೆಗಳ ಸಾರ್ವತ್ರಿಕ ಮುಷ್ಕರಕ್ಕೆ ವಿಪಕ್ಷಗಳ ಕರೆ, ಶಾಲೆಗಳು, ಮತಗಟ್ಟೆಗಳಿಗೆ ಬೆಂಕಿ

Update: 2024-01-06 18:01 GMT

Photo : Munir uz zaman/AFP

ಢಾಕಾ: ಬಾಂಗ್ಲಾದೇಶದಲ್ಲಿ ಪ್ರಮುಖ ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ರವಿವಾರ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಮಧ್ಯೆ, ಚುನಾವಣೆ ಬಹಿಷ್ಕರಿಸಿರುವ ಪ್ರಮುಖ ವಿರೋಧ ಪಕ್ಷಗಳು ಶನಿವಾರ ಮತ್ತು ರವಿವಾರ ದೇಶದಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ.

ಹಲವೆಡೆ ಹಿಂಸಾಚಾರ ಭುಗಿಲೆದ್ದಿದ್ದು ನಾಲ್ಕು ಮತಗಟ್ಟೆ ಸೇರಿದಂತೆ ಕನಿಷ್ಠ 5 ಪ್ರಾಥಮಿಕ ಶಾಲೆಗಳಿಗೆ ಗುರುತಿಸಲಾಗದ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಢಾಕಾದ ಹೊರವಲಯದಲ್ಲಿನ ಗಾಝಿಪುರದಲ್ಲಿ ಶುಕ್ರವಾರ ರಾತ್ರಿ ಮತಗಟ್ಟೆಗಳಿಗೆ ಬೆಂಕಿ ಹಚ್ಚಲಾಗಿದೆ. ಚುನಾವಣೆಗೆ ಅಡ್ಡಿಪಡಿಸುವ ಉದ್ದೇಶದ ಕೃತ್ಯ ಇದಾಗಿದೆ. ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದ್ದು ಕಟ್ಟೆಚ್ಚರ ವಹಿಸಲಾಗಿದೆ ಎಂದು ಗಾಝಿಪುರ ಪೊಲೀಸ್ ಮುಖ್ಯಸ್ಥ ಕಾಝಿ ಶಫೀಕುಲ್ ಖಾನ್ ಹೇಳಿದ್ದಾರೆ.

ಮತಗಟ್ಟೆಗಳಿಗೆ ಭದ್ರತೆ ಬಿಗಿಗೊಳಿಸುವಂತೆ ಚುನಾವಣಾ ಆಯೋಗ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಅಲ್ ಜಝೀರಾ ವರದಿ ಮಾಡಿವೆ. ಗಲಭೆಕೋರರು ಈಶಾನ್ಯದ ಮೌಲ್ವಿಬಝಾರ್ ಮತ್ತು ಹಬೀಗಂಜ್ನ ಮತಗಟ್ಟೆಗಳ ಮೇಲೆಯೂ ದಾಳಿ ನಡೆಸಿದ್ದಾರೆ. ಗುರುವಾರ ರಾತ್ರಿ ಶಾಲೆಯೊಂದಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಶುಕ್ರವಾರ ಇದೇ ಶಾಲೆಗೆ ಮತ್ತೆ ಬೆಂಕಿ ಹಚ್ಚುವ ಪ್ರಯತ್ನ ನಡೆದಿದ್ದು ಅದನ್ನು ವಿಫಲಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸೈದುರ್ ರಹ್ಮಾನ್ ಹೇಳಿದ್ದಾರೆ.

ಈ ಮಧ್ಯೆ, ಬಾಂಗ್ಲಾದೇಶದ ಪ್ರಮುಖ ವಿಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ) ನೇತೃತ್ವದಲ್ಲಿ ವಿರೋಧ ಪಕ್ಷಗಳು ಶನಿವಾರದಿಂದ 48 ಗಂಟೆಗಳ ಸಾರ್ವತ್ರಿಕ ಮುಷ್ಕರವನ್ನು ಆರಂಭಿಸಿವೆ. ವಿರೋಧ ಪಕ್ಷದ ಕಾರ್ಯಕರ್ತರ ತಂಡವು ಢಾಕಾ ಮತ್ತಿತರ ಪ್ರಮುಖ ನಗರಗಳಲ್ಲಿ ರ್ಯಾಲಿ ನಡೆಸಿ ಮುಷ್ಕರಕ್ಕೆ ಕೈಜೋಡಿಸುವಂತೆ ಜನತೆಗೆ ಕರೆ ನೀಡಿದ್ದಾರೆ. ಚುನಾವಣೆಯನ್ನು ವಿರೋಧಿಸಿ ಎಡಪಕ್ಷಗಳ ಸುಮಾರು 200 ಸದಸ್ಯರು `ನ್ಯಾಷನಲ್ ಪ್ರೆಸ್ ಕ್ಲಬ್' ಎದುರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿ ಹೇಳಿದೆ.

ರವಿವಾರ ಬೆಳಿಗ್ಗೆ ಬಾಂಗ್ಲಾದಲ್ಲಿ ಮತದಾನ ಆರಂಭವಾಗಲಿದ್ದು 42,000 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

7 ಮಂದಿಯ ಬಂಧನ 

ಪ್ರಯಾಣಿಕರ ರೈಲಿಗೆ ದಾಳಿ ನಡೆಸಿ ಬೆಂಕಿ ಹಚ್ಚಿದ ಆರೋಪದಲ್ಲಿ ಬಿಎನ್ಪಿಯ 7 ಸದಸ್ಯರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪಕ್ಷದ ಹಿರಿಯ ಮುಖಂಡ ನಬೀಯುಲ್ಲಾ ನಬಿ ಬಂಧಿತರಲ್ಲಿ ಸೇರಿದ್ದಾರೆ ಎಂದು `ಎಎಫ್ಪಿ' ಸುದ್ಧಿಸಂಸ್ಥೆ ವರದಿ ಮಾಡಿದೆ.

ನಬಿ ರೈಲಿನ ಮೇಲಿನ ದಾಳಿಯ ಸಂಚು ರೂಪಿಸಿದ್ದು ಈ ದುಷ್ಕೃತ್ಯಕ್ಕೆ ಆರ್ಥಿಕ ನೆರವು ಒದಗಿಸಿದ್ದಾರೆ ಎಂದು ಢಾಕಾ ಪೊಲೀಸ್ ವಕ್ತಾರ ಫಾರೂಕ್ ಹುಸೇನ್ ಹೇಳಿರುವುದಾಗಿ ವರದಿಯಾಗಿದೆ. ಆದರೆ ಈ ನಕಲಿ ಮತದಾನದಿಂದ ಜನರ ಗಮನ ಬೇರೆಡೆ ಸೆಳೆಯಲು ಪಕ್ಷದ ಸದಸ್ಯರನ್ನು ಬಂಧಿಸಲಾಗಿದೆ ಎಂದು ಬಿಎನ್ಪಿ ಖಂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News