ಫೆಲೆಸ್ತೀನ್ ಸಾರ್ವಭೌಮತ್ವಕ್ಕೆ ವಿಶ್ವಸಂಸ್ಥೆ ಸಮಿತಿ ಬೆಂಬಲ : ಲೆಬನಾನ್, ಸಿರಿಯಾಕ್ಕೆ ಪರಿಹಾರ ನೀಡಲು ಇಸ್ರೇಲ್‍ಗೆ ಆಗ್ರಹ
ವಿಶ್ವಸಂಸ್ಥೆ : ಲೆಬನಾನ್ ಮತ್ತು ಸಿರಿಯಾಗಳಿಗೆ ತೈಲ ಸೋರಿಕೆಗೆ ಪರಿಹಾರ ನೀಡಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಫೆಲೆಸ್ತೀನಿಯನ್ನರಿಗೆ ಸಾರ್ವಭೌಮತ್ವವನ್ನು ನೀಡಲು ಇಸ್ರೇಲ್‍ಗೆ ಕರೆ ನೀಡುವ ನಿರ್ಣಯಗಳನ್ನು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಹಣಕಾಸು ಸಮಿತಿ ಅನುಮೋದಿಸಿದೆ.
2006ರಲ್ಲಿ ಇಸ್ರೇಲಿ ವಾಯುಪಡೆಯು ಲೆಬನಾನ್ ನ ಜಿಯಾ ವಿದ್ಯುತ್ ಸ್ಥಾವರದ ಬಳಿ ತೈಲ ಶೇಖರಣಾ ಟ್ಯಾಂಕ್‍ಗಳ ಮೇಲೆ ದಾಳಿ ನಡೆಸಿದ ಬಳಿಕ ತೈಲ ಸೋರಿಕೆಯಾಗಿ ಲೆಬನಾನ್ ನ ಕರಾವಳಿಯ ಮೂರನೇ ಎರಡರಷ್ಟು ಭಾಗ ತೈಲದಿಂದ ಆವರಿಸಿದೆ.
ಕರಡು ನಿರ್ಣಯವನ್ನು ಮಂಡಿಸಿದ ಉಗಾಂಡಾದ ಪ್ರತಿನಿಧಿ `ತೈಲ ಸೋರಿಕೆಯಿಂದ ಜೀವ ವೈವಿಧ್ಯತೆ ಮತ್ತು ಸ್ಥಳೀಯ ಆರ್ಥಿಕತೆಯ ಮೇಲಿನ ಘೋರ ಪರಿಣಾಮವನ್ನು ವಿವರಿಸಿದರು. ಘಟನೆಯು ಲೆಬನಾನ್ ನ ದೀರ್ಘಕಾಲೀನ ಸುಸ್ಥಿರ ಅಭಿವೃದ್ಧಿಯ ಮೇಲೆ ಬೀರಿದ ಋಣಾತ್ಮಕ ಪ್ರಭಾವದ ಬಗ್ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಕಾಳಜಿಯನ್ನು ಮತ್ತು ತೈಲ ಸೋರಿಕೆಯಿಂದ 2014ರಲ್ಲಿ ಲೆಬನಾನ್ ಗೆ ಉಂಟಾದ ನಷ್ಟ 856.4 ದಶಲಕ್ಷ ಡಾಲರ್ ಎಂಬ ವಿಶ್ವಸಂಸ್ಥೆ ವರದಿಯನ್ನು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಇಸ್ರೇಲ್ ನಿಂದ ಲೆಬನಾನ್ ಮತ್ತು ಸಿರಿಯಾಕ್ಕೆ ತ್ವರಿತ ಮತ್ತು ಸಮರ್ಪಕ ಪರಿಹಾರ ಒದಗಿಸಿಕೊಡುವಂತೆ ನಿರ್ಣಯದಲ್ಲಿ ಆಗ್ರಹಿಸಲಾಗಿದೆ.
ಕರಡು ನಿರ್ಣಯವು `ಪೂರ್ವ ಜೆರುಸಲೇಂ ಮತ್ತು ಆಕ್ರಮಿತ ಸಿರಿಯಾದ ಗೋಲನ್ ಸೇರಿದಂತೆ ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಬಳಕೆ , ಹಾನಿ ಮಾಡುವುದು ಅಥವಾ ನಷ್ಟ ಮಾಡುವುದನ್ನು ನಿಲ್ಲಿಸುವಂತೆ ಇಸ್ರೇಲ್‍ಗೆ ಕರೆ ನೀಡಿದೆ. ಜತೆಗೆ, ಇಸ್ರೇಲ್ ನ ಕಾನೂನುಬಾಹಿರ ಚಟುವಟಿಕೆಯಿಂದ ತಮ್ಮ ಸೈಸರ್ಗಿಕ ಸಂಪನ್ಮೂಲಗಳಿಗೆ ಆಗುವ ಹಾನಿಗೆ ಪರಿಹಾರ ಪಡೆಯಲು ಫೆಲೆಸ್ತೀನ್ ಜನರಿಗೆ ಹಕ್ಕು ಇದೆ ಎಂದು ಉಲ್ಲೇಖಿಸಿದೆ.
ನಿರ್ಣಯದ ಪರ 161 ಮತ್ತು ವಿರುದ್ಧ 7 ಮತ ಚಲಾವಣೆಗೊಂಡಿದ್ದು 9 ಸದಸ್ಯರು ಮತದಾನದಿಂದ ದೂರ ಉಳಿದರು.
ಅಮೆರಿಕ, ಅರ್ಜೆಂಟೀನಾ, ಕೆನಡಾ, ಇಸ್ರೇಲ್, ಮೈಕ್ರೋನೇಶ್ಯ, ನೌರು ಮತ್ತು ಪಲಾವು ದೇಶಗಳು ಎರಡೂ ನಿರ್ಣಯಗಳ ವಿರುದ್ಧ ಮತ ಹಾಕಿವೆ.