ಅಫ್ಘಾನ್‍ನಿಂದ ಅಮೆರಿಕ ಪಡೆಗಳ ವಾಪಸಾತಿ ಸಂದರ್ಭದ ಗೊಂದಲಕ್ಕೆ ಬೈಡನ್ ಹೊಣೆ : ತನಿಖಾ ಸಮಿತಿ ವರದಿ

Update: 2024-09-09 16:53 GMT

ಬೈಡನ್ | PC : PTI

ವಾಷಿಂಗ್ಟನ್ : 2021ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕದ ನಿರ್ಗಮನದ ಸಂದರ್ಭದ ಗೊಂದಲ, ಗಡಿಬಿಡಿ, ಅವ್ಯವಸ್ಥೆಗೆ ಅಧ್ಯಕ್ಷ ಬೈಡನ್‍ರನ್ನು ದೂಷಿಸಬೇಕು. ಅವರು ಮಿಲಿಟರಿ ನೀಡಿದ್ದ ಸಲಹೆಯನ್ನು ಕಡೆಗಣಿಸಿದ್ದರು ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಮಿತಿಯ ವರದಿ ಹೇಳಿದೆ.

ಅಫ್ಘಾನಿಸ್ತಾನದಿಂದ ಹಿಂದೆ ಸರಿಯುವ ಗಡುವು ಸಮೀಪಿಸುತ್ತಿದ್ದಂತೆಯೇ ಗೊಂದಲ, ಗಡಿಬಿಡಿಯಲ್ಲಿ ಅಮೆರಿಕದ ಸುಮಾರು 7 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಅಫ್ಘಾನಿಸ್ತಾನದಲ್ಲೇ ಬಿಡಲಾಗಿತ್ತು ಮತ್ತು ಇದು ತಾಲಿಬಾನ್ ಕೈ ಸೇರಿತ್ತು.

ಅಫ್ಘಾನಿಸ್ತಾನದಿಂದ ತೆರಳುವ ಧಾವಂತದಲ್ಲಿ ಅಧ್ಯಕ್ಷ ಬೈಡನ್ ಆಡಳಿತವು ಮಿಲಿಟರಿ ಸಲಹೆಗಳನ್ನು ಹಾಗೂ ಅಂತರಾಷ್ಟ್ರೀಯ ಕಳವಳಗಳನ್ನು ಕಡೆಗಣಿಸಿತ್ತು. ಬೈಡನ್ ಆಡಳಿತ ರಾಷ್ಟ್ರೀಯ ಭದ್ರತೆಯ ವಿಷಯಕ್ಕಿಂತ ರಾಜಕೀಯ ಅಜೆಂಡಾಕ್ಕೆ ಆದ್ಯತೆ ನೀಡಿತ್ತು. ಸೇನೆಯ ಉನ್ನತ ಅಧಿಕಾರಿಗಳು ಪಡೆಗಳನ್ನು ಸಂಪೂರ್ಣ ಹಿಂಪಡೆಯದಂತೆ ಎಚ್ಚರಿಕೆ ನೀಡಿದ್ದರು.

ಅಫ್ಘಾನಿಸ್ತಾನದಿಂದ ತರಾತುರಿಯಲ್ಲಿ ಸೇನೆ ಹಿಂಪಡೆದಿದ್ದರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಗೊಂಡಿದ್ದ ಸರಕಾರವನ್ನು ತಾಲಿಬಾನ್ ಕ್ಷಿಪ್ರವಾಗಿ ಪದಚ್ಯುತಗೊಳಿಸಿತು ಮತ್ತು ಅನೇಕ ಅಮೆರಿಕನ್ನರು ಹಾಗೂ ಮಿತ್ರರಾಷ್ಟ್ರಗಳ ಪ್ರಜೆಗಳನ್ನು ಪ್ರತೀಕಾರಕ್ಕೆ ಗುರಿಯಾಗಿಸಿತು.

2021ರ ಸೆಪ್ಟಂಬರ್ 11ರೊಳಗೆ ಅಫ್ಘಾನಿಸ್ತಾನದಿಂದ ಅಮೆರಿಕನ್ ಯೋಧರನ್ನು ಬೇಷರತ್ತಾಗಿ ಹಿಂಪಡೆಯುವ ತನ್ನ ನಿರ್ಧಾರವನ್ನು 2021ರ ಎಪ್ರಿಲ್ 14ರಂದು ಬೈಡನ್ ಘೋಷಿಸಿದರು. ಆದರೆ ತರಾತುರಿಯ ನಿರ್ಧಾರದಿಂದಾಗಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಅಮೆರಿಕದ 13 ಯೋಧರು ಮೃತಪಟ್ಟರು. ಸುಮಾರು 800 ಅಮೆರಿಕನ್ನರು ಗಡುವು ಮುಗಿದ ಬಳಿಕವೂ ಶತ್ರುಗಳ ಪ್ರದೇಶದಲ್ಲೇ ಅತಂತ್ರರಾಗಿ ಉಳಿದರು.

ಟ್ರಂಪ್ ಆಡಳಿತದ ಸಂದರ್ಭದಲ್ಲಿ ಮಾಡಿಕೊಂಡಿದ್ದ ದೋಹ ಒಪ್ಪಂದದ ಪ್ರಕಾರ ಅಮೆರಿಕದ ಪಡೆಗಳ ವಾಪಸಾತಿಗೂ ಮುನ್ನ ತಾಲಿಬಾನ್ ಕೆಲವು ನಿರ್ದಿಷ್ಟ ಷರತ್ತುಗಳನ್ನು ಪೂರೈಸಬೇಕಿತ್ತು. ಆದರೆ ಈ ಅಂಶಗಳತ್ತ ಬೈಡನ್ ಗಮನಿಸಲೇ ಇಲ್ಲ ಎಂದೂ ವರದಿ ದೂಷಿಸಿದೆ

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News