ಬ್ರಿಟನ್: ರುವಾಂಡಾ ಗಡೀಪಾರು ನೀತಿಗೆ ಆಡಳಿತ ಪಕ್ಷದಲ್ಲೇ ಅಪಸ್ವರ
ಲಂಡನ್ : ಬ್ರಿಟನ್ ಗೆ ದೋಣಿಗಳ ಮೂಲಕ ಬರುವ ಅಕ್ರಮ ವಲಸಿಗರನ್ನು ರುವಾಂಡಾ ದೇಶಕ್ಕೆ ಗಡೀಪಾರು ಮಾಡುವ ನೀತಿಯನ್ನು ಪ್ರಧಾನಿ ರಿಷಿ ಸುನಕ್ ದೃಢವಾಗಿ ಸಮರ್ಥಿಸಿಕೊಂಡಿರುವಂತೆಯೇ, ಈ ವಿಷಯದ ಬಗ್ಗೆ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸದಸ್ಯರೊಳಗೇ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ.
ಈ ಮಧ್ಯೆ, `ವಲಸಿಗರ ಕುರಿತಂತೆ ಸರಕಾರದ ನೀತಿಯೊಂದಿಗೆ ಬಲವಾದ ಭಿನ್ನಾಭಿಪ್ರಾಯ ಇರುವ ಕಾರಣ ರಾಜೀನಾಮೆ ಸಲ್ಲಿಸುವುದಾಗಿ' ವಲಸೆ ಸಚಿವ ರಾಬರ್ಟ್ ಜೆನ್ರಿಕ್ ಘೋಷಿಸಿ ಸುನಕ್ರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಆಶ್ರಯ ಕೋರಿ ಬರುವವರನ್ನು ರುವಾಂಡಕ್ಕೆ ಗಡೀಪಾರು ಮಾಡುವ ತನ್ನ ಇತ್ತೀಚಿನ ಪ್ರಯತ್ನಗಳ ಬಗ್ಗೆ ಸುನಕ್ ಸರಕಾರ ಬುಧವಾರ ಮಾಹಿತಿ ಒದಗಿಸಿದ ಬೆನ್ನಲ್ಲೇ ಈ ಯೋಜನೆ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವುದಾಗಿ ರಾಬರ್ಟ್ ಜೆನ್ರಿಕ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಪ್ರಧಾನಿಯವರ ಕಚೇರಿಯಲ್ಲಿ ತರಾತುರಿಯಲ್ಲಿ ಸುದ್ಧಿಗೋಷ್ಠಿ ನಡೆಸಿದ ಸುನಕ್ ಬಲಪಂಥೀಯ ಕನ್ಸರ್ವೇಟಿವ್ ಸಂಸದರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಿದರು. ವಲಸಿಗರ ಗಡೀಪಾರಿಗೆ ತಡೆ ನೀಡಿರುವ ಯುರೋಪಿಯನ್ ಮಾನವ ಹಕ್ಕುಗಳ ಕೋರ್ಟ್ನಿಂದ ಬ್ರಿಟನ್ ಹೊರಬರಬೇಕೆಂಬುದು ಬಲಪಂಥೀಯ ಸಂಸದರ ಆಗ್ರಹವಾಗಿದೆ.
`ಸರಕಾರ ಮಂಡಿಸಿರುವ ಮಸೂದೆಯು ರುವಾಂಡಾಕ್ಕೆ ಗಡೀಪಾರನ್ನು ತಡೆಯಲು ಬಳಸಲಾದ ಪ್ರತಿಯೊಂದು ಕಾರಣವನ್ನೂ ನಿರ್ಬಂಧಿಸುತ್ತದೆ. ನಿಜವಾದ ಮತ್ತು ಸನ್ನಿಹಿತ ಅಪಾಯವನ್ನು ಹೊಂದಿರುವ ಬಗ್ಗೆ ನಂಬಲರ್ಹ ಮತ್ತು ಬಲವಾದ ಪುರಾವೆಗಳೊಂದಿಗೆ ಸಾಬೀತುಪಡಿಸಿದರೆ ಮಾತ್ರ ಸ್ವಲ್ಪ ರಿಯಾಯಿತಿ ಸಿಗಬಹುದು' ಎಂದು ಸುನಕ್ ಹೇಳಿದರು.
ರುವಾಂಡಾ ಸುರಕ್ಷಿತ ದೇಶವಲ್ಲದ ಕಾರಣ ಗಡೀಪಾರು ಯೋಜನೆ ಕಾನೂನುಬಾಹಿರ ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ನ್ಯಾಯಾಧೀಶರು ತೀರ್ಪು ನೀಡಿದ್ದರು. ಮುಂದಿನ ವಾರ ಗಡೀಪಾರು ಮಸೂದೆಯ ಬಗ್ಗೆ ಬ್ರಿಟನ್ ಸಂಸದರು ಮತ ಚಲಾಯಿಸುವ ನಿರೀಕ್ಷೆಯಿದೆ. ಈ ಮಸೂದೆ ರುವಾಂಡಾವನ್ನು ಸುರಕ್ಷಿತ ದೇಶವೆಂದು ಪರಿಗಣಿಸಲು ನ್ಯಾಯಾಧೀಶರನ್ನು ಒತ್ತಾಯಿಸುತ್ತದೆ ಮತ್ತು ಮಾನವ ಹಕ್ಕುಗಳ ಸೆಕ್ಷನ್ಗಳನ್ನು ನಿರ್ಲಕ್ಷಿಸಲು ಬ್ರಿಟನ್ ಸಚಿವರಿಗೆ ಅಧಿಕಾರ ನೀಡಲು ಪ್ರಸ್ತಾಪಿಸುತ್ತದೆ.
ಈ ವಿಷಯದ ಬಗ್ಗೆ ಸಂಸತ್ನ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿರುವ ಸುನಕ್ `ಬ್ರಿಟನ್ ಏನು ಮಾಡಬೇಕು ಎಂಬುದನ್ನು ವಿದೇಶದ ನ್ಯಾಯಾಲಯ ನಿರ್ಧರಿಸಲು ಅವಕಾಶ ನೀಡಲಾಗದು' ಎಂದರು. `ಈ ಮಸೂದೆ ಕಾರ್ಯನಿರ್ವಹಿಸಲಿದೆ. ವಿಮಾನ (ವಲಸಿಗರನ್ನು ಕರೆದೊಯ್ಯುವ) ಟೇಕ್ಆಫ್ ಆಗಲಿದೆ. ಅಕ್ರಮ ವಲಸಿಗರನ್ನು ಇಲ್ಲಿಗೆ ಬರದಂತೆ ನಾವು ತಡೆಯುತ್ತೇವೆ ಮತ್ತು ಅಂತಿಮವಾಗಿ ದೋಣಿಗಳನ್ನು ತಡೆಯುತ್ತೇವೆ. ನಾನು ಈ ಕೆಲಸವನ್ನು ಪೂರ್ತಿಗೊಳಿಸಲು ಬಯಸುತ್ತೇನೆ. ಅಂದರೆ ಈ ಕಾಯ್ದೆಯನ್ನು ಶಾಸನ ಪುಸ್ತಕದಲ್ಲಿ ಬರೆಯುವುದು ' ಎಂದು ಸುನಕ್ ಹೇಳಿದ್ದಾರೆ.
ರುವಾಂಡಾ ಎಚ್ಚರಿಕೆ
ಈ ಮಧ್ಯೆ, ಬ್ರಿಟನ್ ಅಂತರಾಷ್ಟ್ರೀಯ ಕಾನೂನನ್ನು ಗೌರವಿಸದಿದ್ದರೆ ವಲಸಿಗರನ್ನು ಸ್ವೀಕರಿಸುವ ಒಪ್ಪಂದದಿಂದ ಹೊರಬರುವುದಾಗಿ ರುವಾಂಡಾ ಎಚ್ಚರಿಸಿದೆ.
2022ರ ಎಪ್ರಿಲ್ನಲ್ಲಿ ಬ್ರಿಟನ್ ಮತ್ತು ರುವಾಂಡಾ ದೇಶಗಳ ಮಧ್ಯೆ ಸಹಿಹಾಕಲಾದ 5 ವರ್ಷಾವಧಿಯ ಒಪ್ಪಂದದಂತೆ ಬ್ರಿಟನ್ಗೆ ಆಗಮಿಸುವ ಕೆಲವು ವಲಸಿಗರನ್ನು ರುವಾಂಡಾಕ್ಕೆ ಕಳುಹಿಸಲಾಗುತ್ತದೆ. ರುವಾಂಡಾಕ್ಕೆ ಆಗಮಿಸುವವರಿಗೆ ನಿರಾಶ್ರಿತರ ಸ್ಥಾನಮಾನವನ್ನು ನೀಡಬಹುದು ಮತ್ತು ಅಲ್ಲೇ ನೆಲೆಸಲು ಅವಕಾಶ ನೀಡಬಹುದು. ಅಥವಾ ಇತರ ನೆಲೆಯಲ್ಲಿ ಅಲ್ಲಿ ವಾಸಿಸಲು ಅವಕಾಶ ನೀಡಬಹುದು.
ಇಲ್ಲದಿದ್ದರೆ ಮತ್ತೊಂದು ಸುರಕ್ಷಿತ ದೇಶದಲ್ಲಿ ಆಶ್ರಯ ಪಡೆಯಬಹುದು. 2022ರ ಜನವರಿ 1ರಂದು ಬ್ರಿಟನ್ಗೆ ಅಕ್ರಮವಾಗಿ ಪ್ರವೇಶಿಸಿದವರನ್ನು ರುವಾಂಡಾಕ್ಕೆ ರವಾನಿಸಲಾಗುವುದು ಎಂದು ಬ್ರಿಟನ್ ಸರಕಾರ ಘೋಷಿಸಿದೆ. ಇದಕ್ಕಾಗಿ ಬ್ರಿಟನ್ ಈಗಾಗಲೇ ರುವಾಂಡಾಕ್ಕೆ 140 ದಶಲಕ್ಷ ಪೌಂಡ್ಗಳನ್ನು ಹಸ್ತಾಂತರಿಸಿದೆ(1 ಪೌಂಡ್ನ ಮೌಲ್ಯ ಭಾರತದ 104.87 ರೂಪಾಯಿಗೆ ಸಮ).