ಕೆನಡಾ: ಖಾಲಿಸ್ತಾನ್ ಜನಮತಗಣನೆಗೆ ಅನುಮತಿ ರದ್ದು

Update: 2023-09-04 16:22 GMT

Photo: hindustantimes.com

ಒಟ್ಟಾವ: ಕೆನಡಾದ ಸರಕಾರಿ ಶಾಲೆಯಲ್ಲಿ ಸೆಪ್ಟಂಬರ್ 10ರಂದು ಆಯೋಜಿಸಲಾಗಿದ್ದ ಖಾಲಿಸ್ತಾನ್ ಜನಮತಗಣನೆಗೆ ನೀಡಲಾಗಿದ್ದ ಅನುಮತಿಯನ್ನು ಅಧಿಕಾರಿಗಳು ಹಿಂಪಡೆದಿದ್ದಾರೆ ಎಂದು ವರದಿಯಾಗಿದೆ. ಕಾರ್ಯಕ್ರಮದ ಪ್ರಚಾರಕ್ಕೆ ಅಳವಡಿಸಲಾಗಿದ್ದ ಬ್ಯಾನರ್ಗಳಲ್ಲಿ ಎಕೆ-47 ಮೆಷಿನ್‍ಗನ್ ಫೋಟೋ ಬಳಸಿರುವುದಕ್ಕೆ ವ್ಯಾಪಕ ಕಳವಳ, ವಿರೋಧ ವ್ಯಕ್ತವಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತದ ಪಂಜಾಬ್ ರಾಜ್ಯದಲ್ಲಿ ಸಿಖ್ ರಾಷ್ಟ್ರವನ್ನು ಸ್ಥಾಪಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆಗೆ ಸೆಪ್ಟಂಬರ್ 10ರಂದು ಬ್ರಿಷಿಷ್ ಕೊಲಂಬಿಯಾ ಪ್ರಾಂತದ ಸರ್ರೆ ನಗರದ ತಮನವಿಸ್ ಸೆಕೆಂಡರಿ ಸ್ಕೂಲ್‍ನಲ್ಲಿ ಮತದಾನ ಆಯೋಜಿಸಲಾಗಿತ್ತು. ಇದಕ್ಕೆ ಕೆನಡಾದ ಅಧಿಕಾರಿಗಳು ಅನುಮತಿಯನ್ನೂ ನೀಡಿದ್ದರು. ಆದರೆ ಕಾರ್ಯಕ್ರಮದ ಪ್ರಚಾರಕ್ಕೆ ಹಾಕಿದ್ದ ಪೋಸ್ಟರ್ನಲ್ಲಿ `ಶಾಲೆಯ ಫೋಟೋ, ಅದರ ಪಕ್ಕದಲ್ಲಿ ಎಕೆ-47 ಮೆಷಿನ್ ಗನ್ ಮತ್ತು ಕಿರ್ಪಾನ್(ಸಿಖ್ಖರ ಧಾರ್ಮಿಕ ಸಮವಸ್ತ್ರದ ಭಾಗವಾದ ಕಿರುಗತ್ತಿ)' ಪ್ರದರ್ಶಿಸಲಾಗಿದೆ. ಈ ಬಗ್ಗೆ ವ್ಯಾಪಕ ಖಂಡನೆ, ಕಳವಳ ವ್ಯಕ್ತವಾದ ಬಳಿಕ ಹೇಳಿಕೆ ನೀಡಿರುವ ಶಾಲಾ ಆಡಳಿತ ಮಂಡಳಿ `ಒಪ್ಪಂದದ ನಿಯಮಾವಳಿಯನ್ನು ಕಾರ್ಯಕ್ರಮದ ಸಂಘಟಕರು ಉಲ್ಲಂಘಿಸಿದ್ದಾರೆ. ನಗರದ ಹಲವೆಡೆ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿನ ಪೋಸ್ಟರ್ಗಳಲ್ಲಿ ಕಂಡುಬಂದ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದರೂ ಅದನ್ನು ಪಾಲಿಸಿಲ್ಲ. ಆದ್ದರಿಂದ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವುದಾಗಿ' ಹೇಳಿದ್ದಾರೆ. ಕೆನಡಾದ ಪ್ರದೇಶದಲ್ಲಿ ಪ್ರತ್ಯೇಕತಾವಾದಿಗಳ ಜನಾಭಿಪ್ರಾಯ ಸಂಗ್ರಹಣೆಗೆ ಭಾರತ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.

ಶಾಲೆಯ ಆಡಳಿತ ಮಂಡಳಿಯ ಕ್ರಮವನ್ನು ಸರ್ರೆಯ `ಫ್ರೆಂಡ್ಸ್ ಆಫ್ ಕೆನಡಾ ಆ್ಯಂಡ್ ಇಂಡಿಯಾ ಫೌಂಡೇಷನ್'ನ ಅಧ್ಯಕ್ಷ ಮಣೀಂದರ್ ಗಿಲ್ ಸ್ವಾಗತಿಸಿದ್ದಾರೆ. ಸರಕಾರಿ ಶಾಲೆಯನ್ನು ಪ್ರತ್ಯೇಕತಾವಾದಿಗಳ ಅಭಿಯಾನಕ್ಕೆ ಬಳಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಭಾರತೀಯ ಕೆನಡಿಯನ್ ಸಮುದಾಯದಿಂದ ಆಕ್ಷೇಪ ಮತ್ತು ವಿರೋಧ ವ್ಯಕ್ತವಾಗಿತ್ತು.

ಜನಾಭಿಪ್ರಾಯ ಸಂಗ್ರಹಣೆಯ ಮತ್ತೊಂದು ದಿನಾಂಕವನ್ನು ಕಾರ್ಯಕ್ರಮದ ಸಂಘಟಕರಾದ `ಸಿಖ್ ಫಾರ್ ಜಸ್ಟಿಸ್' (ಎಸ್‍ಎಫ್‍ಜೆ) ಘೋಷಿಸಿಲ್ಲವಾದರೂ, ಸೆಪ್ಟಂಬರ್ 8ರಂದು ಕೆನಡಾದ ವ್ಯಾಂಕೋವರ್ ನಗರದಲ್ಲಿನ ಭಾರತದ ಕಾನ್ಸುಲೇಟ್ ಕಚೇರಿಗೆ ಬೀಗ ಜಡಿಯಲು ಆ ನಗರದಲ್ಲಿನ ಖಾಲಿಸ್ತಾನ್ ಪರ ಸಂಘಟನೆಗೆ ಕರೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News