ಕೆನಡಾ: ಭಾರತ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾಚಾರ; ಇಬ್ಬರ ಬಂಧನ

Update: 2023-07-09 17:21 GMT

ಒಟ್ಟಾವ: ಕೆನಡಾದ ಟೊರಂಟೊದಲ್ಲಿನ ಭಾರತೀಯ ಕಾನ್ಸುಲೇಟ್ ಕಚೇರಿಯೆದುರು ಶನಿವಾರ ಖಾಲಿಸ್ತಾನ್ ಪರ ಸಂಘಟನೆ ಆಯೋಜಿಸಿದ್ದ ಭಾರತ-ವಿರೋಧಿ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಖಾಲಿಸ್ತಾನಿವಾದಿಗಳನ್ನು ಬಂಧಿಸಿದ್ದಾರೆ.

ಶನಿವಾರ ಭಾರತೀಯ ಕಾನ್ಸುಲೇಟ್ ಕಚೇರಿಯೆದುರು ರ್ಯಾಲಿ ನಡೆಸುವ ಬಗ್ಗೆ ಪೋಸ್ಟರ್ ಗಳ ಮೂಲಕ, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ನಡೆಸಲಾಗಿತ್ತು. ಭಾರತ ವಿರೋಧಿ ಘೋಷಣೆಯ ಜತೆಗೆ ಒಟ್ಟಾವದಲ್ಲಿನ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮ, ಟೊರಂಟೋದ ಕಾನ್ಸುಲ್ ಜನರಲ್ ಅಪೂರ್ವ ಶ್ರೀವಾಸ್ತವ ಮತ್ತು ವಾಂಕೋವರ್ನ ಕಾನ್ಸುಲ್ ಜನರಲ್ ಮನೀಷ್ ಅವರ ಭಾವಚಿತ್ರವನ್ನೂ ಎಚ್ಚರಿಕೆಯ ಸಂದೇಶದ ಜತೆ ಪೋಸ್ಟರ್ ನಲ್ಲಿ ಅಂಟಿಸಲಾಗಿತ್ತು.

ಶನಿವಾರ ಕಾನ್ಸುಲೇಟ್ ಕಚೇರಿಯೆದುರು ಸುಮಾರು 250 ಖಾಲಿಸ್ತಾನಿ ಬೆಂಬಲಿಗರು ಸಭೆ ಸೇರಿ ಪ್ರತಿಭಟನೆ ಆರಂಭಿಸಿದಾಗ ಪ್ರತಿಯಾಗಿ ಭಾರತ ಪರ ಸಂಘಟನೆಯೂ ಇದೇ ಸ್ಥಳದಲ್ಲಿ ಸೇರಿ, ಖಾಲಿಸ್ತಾನ್ ಬೆಂಬಲಿಗರ ವಿರುದ್ಧ ಘೋಷಣೆ ಕೂಗಿದರು. ಆಗ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನೆಲೆಸಿತ್ತು. ತಕ್ಷಣ ಪೊಲೀಸರು ಬ್ಯಾರಿಕೇಡ್ಗಳನ್ನು ನಿರ್ಮಿಸಿ ಎರಡೂ ಗುಂಪುಗಳನ್ನು ಚದುರಿಸಲು ಪ್ರಯತ್ನಿಸಿದರು.

ಆದರೆ ಪೊಲೀಸರ ಬ್ಯಾರಿಕೇಡ್ಗಳನ್ನು ಪಕ್ಕಕ್ಕೆ ತಳ್ಳಿದ ಖಾಲಿಸ್ತಾನ್ ಬೆಂಬಲಿಗರು ಭಾರತ ಪರ ಪ್ರತಿಭಟನಾಕಾರರತ್ತ ನುಗ್ಗಿದಾಗ ಪೊಲೀಸರು ಅವರನ್ನು ತಡೆದರು. ಈ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಖಾಲಿಸ್ತಾನಿ ಬೆಂಬಲಿಗರನ್ನು ವಶಕ್ಕೆ ಪಡೆಯಲಾಯಿತು. ಆದರೆ ಯಾವುದೇ ಪ್ರಕರಣ ದಾಖಲಿಸದೆ ಬಿಡುಗಡೆಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News