ಚೀನಾ: ವಧು ಕಿರಿಯ ವಯಸ್ಸಿನವಳಾಗಿದ್ದರೆ ದಂಪತಿಗೆ ನಗದು ಪುರಸ್ಕಾರ
ಬೀಜಿಂಗ್: ಚೀನಾದಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ, ಯುವಜನರನ್ನು ಮದುವೆಯಾಗಲು ಪ್ರೋತ್ಸಾಹಿಸುವ ಕ್ರಮವಾಗಿ ವಧು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ ದಂಪತಿಗೆ 137 ಡಾಲರ್ ನಗದು ಪುರಸ್ಕಾರ ನೀಡುವ ಯೋಜನೆಯನ್ನು ಚಾಂಗ್ಷಾನ್ ನಗರ ಘೋಷಿಸಿದೆ.
ಸೂಕ್ತ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು ಮಗುವನ್ನು ಹೆರುವುದನ್ನು ಉತ್ತೇಜಿಸುವುದು ಈ ನಗದು ಯೋಜನೆಯ ಉದ್ದೇಶವಾಗಿದೆ. ಮಕ್ಕಳನ್ನು ಹೊಂದಿರುವ ದಂಪತಿಗೆ ಶಿಶುಪಾಲನೆ ಮತ್ತು ಶಿಕ್ಷಣ ಸಬ್ಸಿಡಿಯನ್ನು ಈ ಯೋಜನೆ ಹೊಂದಿದೆ ಎಂದು ಚಾಂಗ್ಷಾನ್ ನಗರಾಡಳಿತದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಕಳೆದ 6 ದಶಕಗಳಲ್ಲೇ ಮೊದಲ ಬಾರಿಗೆ ಚೀನಾದ ಜನಸಂಖ್ಯೆಯ ಪ್ರಮಾಣ ತೀವ್ರಗತಿಯಲ್ಲಿ ಕುಸಿತ ಕಂಡಿದ್ದು ಜನನ ಪ್ರಮಾಣ ದರವನ್ನು ಮೇಲೆತ್ತುವ ಪ್ರಯತ್ನವಾಗಿ ಆರ್ಥಿಕ ಪ್ರೋತ್ಸಾಹ, ಸುಧಾರಿತ ಶಿಶುಪಾಲನಾ ಸೌಲಭ್ಯ ಸೇರಿದಂತೆ ಅಧಿಕಾರಿಗಳು ಹಲವು ತುರ್ತು ಕ್ರಮಗಳನ್ನು ಘೋಷಿಸಿದ್ದಾರೆ.
ಚೀನಾದ ಕಾನೂನುಬದ್ಧ ವಿವಾಹದ ವಯಸ್ಸಿನ ಮಿತಿಯು ಪುರುಷರಿಗೆ 22 ವರ್ಷ ಮತ್ತು ಮಹಿಳೆಯರಿಗೆ 20 ವರ್ಷವಾಗಿದೆ. ಆದರೆ ಮದುವೆಯಾಗುವ ಜೋಡಿಗಳ ಸಂಖ್ಯೆ ಕುಸಿಯುತ್ತಿದೆ. ಸರಕಾರದ ಕಾರ್ಯನೀತಿಯಿಂದಾಗಿ ಒಂಟಿ ಮಹಿಳೆಯರಿಗೆ ಮಗುವನ್ನು ಹೊಂದಲು ಕಷ್ಟಕರವಾಗಿದೆ. 2022ರಲ್ಲಿ ಚೀನಾದಲ್ಲಿ ಮದುವೆಯ ಪ್ರಮಾಣ 6.8 ದಶಲಕ್ಷಕ್ಕೆ ಕುಸಿದಿದ್ದು ಇದು ದಾಖಲೆಯ ಕನಿಷ್ಟ ಮಟ್ಟವಾಗಿದೆ. 2021ಕ್ಕೆ ಹೋಲಿಸಿದರೆ ಇದು 8 ಲಕ್ಷ ಕಡಿಮೆಯಾಗಿದೆ.
ಚೀನಾದ ಫಲವತ್ತತೆ ಪ್ರಮಾಣ ವಿಶ್ವದಲ್ಲೇ ಕನಿಷ್ಟವಾಗಿದ್ದು 2022ರಲ್ಲಿ 1.09ರ ದಾಖಲೆಯ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಶಿಶುಪಾಲನಾ ವೆಚ್ಚ ಹೆಚ್ಚಿರುವುದು ಹಾಗೂ ವೃತ್ತಿಜೀವನಕ್ಕೆ ತೊಡಕಾಗುತ್ತದೆ ಎಂಬ ಕಾರಣಕ್ಕೆ ಹಲವು ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಲು ಹಿಂಜರಿಯುತ್ತಿದ್ದಾರೆ. ಲಿಂಗ ತಾರತಮ್ಯ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಹಿಳೆಯರದ್ದು ಎಂಬ ಸಾಂಪ್ರದಾಯಿಕ ಭಾವನೆ ದೇಶದಲ್ಲಿ ಈಗಲೂ ವ್ಯಾಪಕವಾಗಿದೆ.
ಗ್ರಾಹಕರ ವಿಶ್ವಾಸ ಕಡಿಮೆಯಾಗಿರುವುದು, ಚೀನಾದ ಅರ್ಥವ್ಯವಸ್ಥೆಯ ಸ್ಥಿರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳವೂ ಚೀನಾದ ಯುವಜನತೆ ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿರುವುದಕ್ಕೆ ಪ್ರಮುಖ ಅಂಶವಾಗಿದೆ ಎಂದು ಮೂಲಗಳು ಹೇಳಿವೆ.