ಜಪಾನ್ನ ಮಿಲಿಟರಿ ನೆಟ್ವರ್ಕ್ ಹ್ಯಾಕ್ ಮಾಡಿದ ಚೀನಾ: ವರದಿ
ವಾಷಿಂಗ್ಟನ್: ಜಪಾನ್ ಮಿಲಿಟರಿಯ ಅತ್ಯಂತ ಸೂಕ್ಷ್ಮ ನೆಟ್ವರ್ಕ್ಗೆ 2020ರ ಡಿಸೆಂಬರ್ನಲ್ಲಿ ಚೀನಾದ ಸೇನೆ ಹ್ಯಾಕ್ ಮಾಡಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ಬುಧವಾರ ವರದಿ ಮಾಡಿದೆ.
ವರದಿಯ ಪ್ರಕಾರ, ಚೀನಾ ಸೇನೆಯ ಸೈಬರ್ ಬೇಹುಗಾರರು ಜಪಾನ್ ನ ಅತ್ಯಂತ ಮಹತ್ವದ ಕಂಪ್ಯೂಟರ್ ವ್ಯವಸ್ಥೆಯೊಳಗೆ ನುಸುಳಿದ್ದರು. ಹ್ಯಾಕರ್ಗಳು ಕಂಪ್ಯೂಟರ್ ವ್ಯವಸ್ಥೆಯೊಳಗೆ ಆಳವಾದ, ನಿರಂತರ ಪ್ರವೇಶವನ್ನು ಹೊಂದಿದ್ದರು. ಜಪಾನ್ ಮಿಲಿಟರಿಯ ಯೋಜನೆಗಳು, ಸಾಮಥ್ರ್ಯ ಮತ್ತು ನ್ಯೂನತೆಗಳ ಕುರಿತ ವಿವರವನ್ನು ಪಡೆದಿದ್ದರು ಎಂದು ಅಮೆರಿಕದ ಮಾಜಿ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಅಮೆರಿಕದ ಸೈಬರ್ ಕಮಾಂಡ್ ಮತ್ತು ಎನ್ಎಸ್ಎ ಮುಖ್ಯಸ್ಥನಾಗಿದ್ದ ಜನರಲ್ ಪಾಲ್ ನ್ಯಕಸೋನ್ ಹಾಗೂ ಶ್ವೇತಭವನದ ಸಹಾಯಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಮ್ಯಾಥ್ಯೂ ಪೊಟಿಂಜರ್ ಜಪಾನ್ಗೆ ಧಾವಿಸಿ ಆ ದೇಶದ ರಕ್ಷಣಾ ಸಚಿವರ ಜತೆ ಮಾತುಕತೆ ನಡೆಸಿ ಜಪಾನ್ ಪ್ರಧಾನಿಗೆ ಮಾಹಿತಿ ನೀಡಿದ್ದಾರೆ. ಬಳಿಕ
ಜಪಾನ್ ತನ್ನ ಕಂಪ್ಯೂಟರ್ ನೆಟ್ವರ್ಕ್ಗಳನ್ನು ಬಲಪಡಿಸುವ ಪ್ರಯತ್ನ ನಡೆಸಿದೆ. ಆದರೂ ಚೀನಾದ ಹ್ಯಾಕರ್ಗಳ ಹದ್ದಿನಕಣ್ಣಿನಿಂದ ರಕ್ಷಿಸಲು ಇದು ಪರ್ಯಾಪ್ತವಾಗಿಲ್ಲ ಎಂದು ವರದಿ ಹೇಳಿದೆ. ಬಳಿಕ ಜೋ ಬೈಡನ್ ಸರಕಾರದ ಅವಧಿಯಲ್ಲಿ ಅಮೆರಿಕದ ಪರಿಶೀಲನೆಯ ನೆರವಿಂದ ನೆಟ್ವರ್ಕ್ ಭದ್ರತೆಯನ್ನು ಹೆಚ್ಚಿಸಿರುವುದಾಗಿ ಜಪಾನೀಯರು ಘೋಷಿಸಿದ್ದು ಮುಂದಿನ 5 ವರ್ಷಾವಧಿಯ ಬಜೆಟ್ನಲ್ಲಿ ಸೈಬರ್ ಸೆಕ್ಯುರಿಟಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಜತೆಗೆ ಮಿಲಿಟರಿ ಸೈಬರ್ ಸೆಕ್ಯುರಿಟಿ ಪಡೆಯನ್ನು 4 ಪಟ್ಟು ಅಂದರೆ 4000ಕ್ಕೆ ಹೆಚ್ಚಿಸಲಾಗಿದೆ ಎಂದು ವರದಿ ಹೇಳಿದೆ.
ಇದರ ಜತೆಗೆ, ರಶ್ಯದ ಮಿಲಿಟರಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಇಂಜಿನಿಯರ್ಗಳು ಹಾಗೂ ವಿಜ್ಞಾನಿಗಳಿಗೆ ಚೀನಾದ ಹ್ಯಾಕರ್ಗಳು `ಮಾಲ್ವೇರ್' ಬಳಸಿ ಇ-ಮೇಲ್ ರವಾನಿಸಿ ರಶ್ಯದ ಭದ್ರತಾ ವ್ಯವಸ್ಥೆಯ ಕುರಿತ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದ್ದರು. ರಶ್ಯದ ಸಚಿವಾಲಯದ ಹೆಸರಲ್ಲಿ ರವಾನಿಸಿರುವ ಈ ಇ-ಮೇಲ್ `ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಅಮೆರಿಕದ ನಿರ್ಬಂಧಕ್ಕೆ ಗುರಿಯಾಗಿರುವ ವ್ಯಕ್ತಿಗಳ ಹೆಸರನ್ನು ಒದಗಿಸುವಂತೆ' ಸೂಚಿಸಿತ್ತು ಎಂದು ಇಸ್ರೇಲ್-ಅಮೆರಿಕನ್ ಸೈಬರ್ ಭದ್ರತಾ ಸಂಸ್ಥೆಯನ್ನು ಉಲ್ಲೇಖಿಸಿದ ವರದಿ ಹೇಳಿದೆ.