ಬಾಹ್ಯಾಕಾಶ ನಿಲ್ದಾಣದ ಗಾತ್ರ ದ್ವಿಗುಣಗೊಳಿಸಲು ಚೀನಾ ಯೋಜನೆ
ಬೀಜಿಂಗ್: ನಾಸಾ ನೇತೃತ್ವದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್) ತನ್ನ ಜೀವಿತಾವಧಿಯ ಅಂತ್ಯವನ್ನು ಸಮೀಪಿಸುತ್ತಿರುವಾಗ ಇತರ ರಾಷ್ಟ್ರಗಳ ಗಗನಯಾತ್ರಿಗಳಿಗೆ ಕಾರ್ಯಾಚರಣೆಗೆ ಪರ್ಯಾಯ ವೇದಿಕೆಯನ್ನು ನೀಡುವ ಮೂಲಕ ಮುಂಬರುವ ವರ್ಷಗಳಲ್ಲಿ ತನ್ನ ಬಾಹ್ಯಾಕಾಶ ನಿಲ್ದಾಣವನ್ನು ವಿಸ್ತರಿಸಲು ಚೀನಾ ಯೋಜನೆ ರೂಪಿಸಿದೆ.
ಈಗ 3 ಮೊಡ್ಯೂಲ್ಗಳನ್ನು ಹೊಂದಿರುವ ಬಾಹ್ಯಾಕಾಶ ನಿಲ್ದಾಣವನ್ನು 6 ಮೊಡ್ಯೂಲ್ಗಳಿಗೆ ವಿಸ್ತರಿಸಲಾಗುವುದು. ಜೊತೆಗೆ ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆ ಜೀವಿತಾವಧಿ 15 ವರ್ಷಕ್ಕೂ ಅಧಿಕವಾಗಲಿದೆ ಎಂದು ಚೀನಾದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ(ಸಿಎಎಸ್ಟಿ) ಹೇಳಿದೆ.
ಚೀನಾ ನಿರ್ಮಿಸಿರುವ ಬಾಹ್ಯಾಕಾಶ ನಿಲ್ದಾಣ ತಿಯಾಂಗಾಂಗ್ 2022ರ ಅಂತ್ಯದಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು 450 ಕಿ.ಮೀ ಕಕ್ಷೆಯ ಎತ್ತರದಲ್ಲಿ ಗರಿಷ್ಟ 3 ಗಗನಯಾತ್ರಿಗಳಿಗೆ ವಾಸ್ತವ್ಯಕ್ಕೆ ಅವಕಾಶವಿದೆ. ಐಎಸ್ಎಸ್ನಲ್ಲಿ 7 ಗಗನಯಾತ್ರಿಗಳಿರಲು ಅವಕಾಶವಿದೆ. ಆದರೆ 2 ದಶಕಗಳಿಗೂ ಅಧಿಕ ಸಮಯದಿಂದ ಕಕ್ಷೆಯಲ್ಲಿರುವ ಐಎಸ್ಎಸ್ 2030ರಲ್ಲಿ ಕಾರ್ಯಸ್ಥಗಿತಗೊಳಿಸುವ ನಿರೀಕ್ಷೆಯಿದ್ದು ಈ ಸಮಯದಲ್ಲಿ ತಾನು ಬಾಹ್ಯಾಕಾಶದ ಪ್ರಮುಖ ಶಕ್ತಿಯಾಗಲಿದ್ದೇನೆ ಎಂದು ಚೀನಾ ಹೇಳುತ್ತಿದೆ. `ತಿಯಾಂಗಾಂಗ್ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಐಎಸ್ಎಸ್ ನಿವೃತ್ತಿಯತ್ತ ಸಾಗುತ್ತಿರುವುದರಿಂದ ಚೀನಾ ಮುಂಚೂಣಿಯಲ್ಲಿದೆ. ತಮ್ಮ ಗಗನಯಾತ್ರಿಗಳನ್ನು ಚೀನಾದ ನಿಲ್ದಾಣಕ್ಕೆ ಕಳಹಿಸುವಂತೆ ಹಲವು ದೇಶಗಳು ಕೋರಿಕೆ ಸಲ್ಲಿಸಿವೆ' ಎಂದು ಸರಕಾರಿ ಸ್ವಾಮ್ಯದ `ಗ್ಲೋಬಲ್ ಟೈಮ್ಸ್' ವರದಿ ಮಾಡಿದೆ.