ಆಳವಾದ ಸಮಸ್ಯೆಯಲ್ಲಿ ಚೀನಾದ ಆರ್ಥಿಕತೆ: ವರದಿ
China's Economy in Deep Trouble: A Report
ಬೀಜಿಂಗ್: ವಿಶ್ವದ ಎರಡನೇ ಅತೀ ದೊಡ್ಡ ಅರ್ಥವ್ಯವಸ್ಥೆಯಾಗಿರುವ ಚೀನಾದ ಆರ್ಥಿಕತೆಯು ಈಗ ಆಳವಾದ ಸಮಸ್ಯೆಯಲ್ಲಿದ್ದು ಕಳೆದ 40 ವರ್ಷಗಳ ಯಶಸ್ವೀ `ಬೆಳವಣಿಗೆಯ ಮಾದರಿ' ಈಗ ಭಗ್ನಗೊಂಡಿದೆ ಎಂದು ಅಮೆರಿಕದ `ವಾಲ್‍ಸ್ಟ್ರೀಟ್ ಜರ್ನಲ್'ನ ಸಂಶೋಧನಾ ವರದಿ ಹೇಳಿದೆ.
ಚೀನಾದ ದೂರದ ಪ್ರಾಂತ್ಯಗಳಲ್ಲೂ ನಿರಾಶಾಯದ ಅಂಕಿಅಂಶ ವರದಿಯಾಗುತ್ತಿದ್ದು ಚೀನಾವು ಈಗ ಇನ್ನಷ್ಟು ನಿಧಾನಗತಿಯ ಅಭಿವೃದ್ಧಿಯ ಯುಗವನ್ನು ಪ್ರವೇಶಿಸಿದೆ . ಪ್ರತಿಕೂಲವಾದ ಜನಸಂಖ್ಯಾ ಶಾಸ್ತ್ರ ಮತ್ತು ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳೊಂದಿಗಿನ ಅಂತರ ಹೆಚ್ಚುತ್ತಿರುವುದರಿಂದ ವಿದೇಶಿ ಹೂಡಿಕೆ ಮತ್ತು ವ್ಯಾಪಾರಕ್ಕೆ ತೊಡಕಾಗಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಆರ್ಥಿಕ ದುರ್ಬಲ ಅವಧಿಯ ಬದಲು ಇದು ದೀರ್ಘಾವಧಿಯ ಸಮಸ್ಯೆಯಾಗುವ ಲಕ್ಷಣವಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನಾವು ಆರ್ಥಿಕತೆಯ ಇತಿಹಾಸದಲ್ಲೇ ಅತ್ಯಂತ ನಾಟಕೀಯ ಪಥದಲ್ಲಿ ಬದಲಾವಣೆಯನ್ನು ವೀಕ್ಷಿಸುತ್ತಿದ್ದೇವೆ. ಚೀನಾದ `ಅಭಿವೃದ್ದಿಯ ಮಾದರಿ' ಭಂಗಗೊಂಡಿದೆ ಎಂದು ಆರ್ಥಿಕ ತಜ್ಞ ಆಡಂ ತೂಝೆಯನ್ನು ಉಲ್ಲೇಖಿಸಿ `ವಾಲ್‍ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ. ವರದಿಯ ಪ್ರಕಾರ, ಚೀನಾದ ಒಟ್ಟು ಸಾಲ(ಸರಕಾರದ ವಿವಿಧ ಇಲಾಖೆಗಳು ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಸಾಲ ಸೇರಿ) 2022ರ ಚೀನಾದ ಜಿಡಿಪಿಯ ಸುಮಾರು 300%ದಷ್ಟಕ್ಕೆ ಏರಿಕೆಯಾಗಿದೆ. ಇದು ಅಮೆರಿಕದ ಸಾಲದ ಪ್ರಮಾಣವನ್ನೂ ಮೀರಿದೆ. ಈ ಹಿಂದಿನ ದಶಕದ ಅಭಿವೃದ್ಧಿಯ ಮಾದರಿ ಅದರ ಮಿತಿಯನ್ನು ತಲುಪಿದೆ ಚೀನಾದ ಅಧಿಕಾರದ ಕಾರಿಡಾರ್‍ನಲ್ಲಿ ಹಿರಿಯ ಅಧಿಕಾರಿಗಳು ಗುರುತಿಸಿದ್ದಾರೆ.
ಕಳೆದ ವರ್ಷ ಚೀನಾ ಕಮ್ಯುನಿಸ್ಟ್ ಪಕ್ಷದ ಹೊಸ ತಲೆಮಾರಿನ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಆರ್ಥಿಕ ಚಟುವಟಿಕೆಯ ವಿಸ್ತರಣೆಯ ಉದ್ದೇಶದಿಂದ ನಿರ್ಮಾಣ ಕಾಮಗಾರಿಗೆ ಸಾಲ ಪಡೆಯುವುದನ್ನು ಅವಲಂಬಿಸದಂತೆ ಎಚ್ಚರಿಕೆ ನೀಡಿದ್ದರು. `ಕೆಲ ವ್ಯಕ್ತಿಗಳು ಅಭಿವೃದ್ಧಿ ಎಂದರೆ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಮತ್ತು ಹೂಡಿಕೆಗಳನ್ನು ಹೆಚ್ಚಿಸುವುದು ಎಂದು ನಂಬಿದ್ದಾರೆ. ಆದರೆ ಹೊಸ ಶೂಸ್ ಧರಿಸಿ ಹಳೆಯ ರಸ್ತೆಯಲ್ಲಿ ನಡೆಯಲಾಗದು' ಎಂದು ಜಿಂಪಿಂಗ್ ಹೇಳಿದ್ದರು. ಆದರೆ ಜಿಂಪಿಂಗ್ ಹಾಗೂ ಅವರ ತಂಡವು ದೇಶದ ಹಳೆಯ ಅಭಿವೃದ್ಧಿ ಮಾದರಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಇದುವರೆಗೆ ಹೆಚ್ಚಿನದೇನನ್ನೂ ಮಾಡಿಲ್ಲ ಎಂದು ವರದಿ ಹೇಳಿದೆ.
ಜಿಡಿಪಿ ಬೆಳವಣಿಗೆ
ಕಳೆದ ವರ್ಷಕ್ಕೆ ಹೋಲಿಸಿದರೆ, 2023ರ ಪ್ರಥಮಾರ್ಧದಲ್ಲಿ ಚೀನಾದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 5.5%ದಷ್ಟು ಬೆಳವಣಿಗೆಯಾಗಿದೆ ಎಂದು ಚೀನಾದ ರಾಷ್ಟ್ರೀಯ ಅಂಕಿಅಂಶ ಬ್ಯೂರೊ(ಎನ್‍ಬಿಎಸ್) ಜನವರಿಯಲ್ಲಿ ಹೇಳಿದೆ. ಈ ಅವಧಿಯಲ್ಲಿ ಚೀನಾದ ಜಿಡಿಪಿಯು ಸುಮಾರು 8.3 ಲಕ್ಷ ಕೋಟಿ ಡಾಲರ್‍ಗೆ ತಲುಪಿದೆ. ಎರಡನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿಯು 6.3%ಕ್ಕೆ ಹೆಚ್ಚಿದೆ ಎಂದು ಎನ್‍ಬಿಎಸ್ ವರದಿ ಮಾಡಿದೆ. ಈ ಮಧ್ಯೆ, ಚೀನಾವು ತನ್ನ ಪ್ರಧಾನ ಸಾಲದ ದರವನ್ನು 10 ಮೂಲ ಅಂಕದಷ್ಟು ಕೆಳಗಿಳಿಸಿದ್ದು 3.55%ದಿಂದ 3.45%ಕ್ಕೆ ಇಳಿಸಿದೆ ಎಂದು ವರದಿಯಾಗಿದೆ.