ಇರಾನ್ ಜತೆಗಿನ ಸಂಬಂಧ ವೃದ್ಧಿಗೆ ಆದ್ಯತೆ : ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್
ಕಝಾನ್ : ಇರಾನ್ ಜತೆಗಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಆದ್ಯತೆ ನೀಡುವುದಾಗಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಘೋಷಿಸಿದ್ದಾರೆ.
ರಶ್ಯದ ಕಝಾನ್‍ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜತೆಗಿನ ಸಭೆಯಲ್ಲಿ ಮಾತನಾಡಿದ ಜಿಂಪಿಂಗ್ ` ಅಂತರಾಷ್ಟ್ರೀಯ ಮತ್ತು ಪ್ರಾದೇಶಿಕ ಪರಿಸ್ಥಿತಿ ಹೇಗೆ ಬದಲಾದರೂ ಚೀನಾವು ಇರಾನ್ ನೊಂದಿಗೆ ಸ್ನೇಹಪರ ಸಹಕಾರವನ್ನು ಸ್ಥಿರವಾಗಿ ಅಭಿವೃದ್ಧಿಪಡಿಸುತ್ತದೆ' ಎಂದರು.
ಗಾಝಾ ಮತ್ತು ಲೆಬನಾನ್‍ನಲ್ಲಿ ತಕ್ಷಣ ಕದನ ವಿರಾಮ ಜಾರಿಗೊಳ್ಳಬೇಕು ಮತ್ತು ಅಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ನಿಲ್ಲಿಸುವ ಅಗತ್ಯವಿದೆ. ಫೆಲೆಸ್ತೀನ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ರೂಪಿಸಲು ಇದು ಸಕಾಲವಾಗಿದೆ ಎಂದು ಜಿಂಪಿಂಗ್ ಹೇಳಿರುವುದಾಗಿ ವರದಿಯಾಗಿದೆ.
ಇರಾನ್ ತನ್ನ ರಾಷ್ಟ್ರೀಯ ಸಾರ್ವಭೌಮತ್ವ, ಭದ್ರತೆ ಮತ್ತು ರಾಷ್ಟ್ರೀಯ ಘನತೆಯನ್ನು ಕಾಪಾಡುವಲ್ಲಿ, ತನ್ನದೇ ಆದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಸ್ಥಿರವಾಗಿ ಮುನ್ನಡೆಸುವಲ್ಲಿ ಚೀನಾ ನೆರವಾಗಲಿದೆ ಎಂದು ಚೀನಾ ಅಧ್ಯಕ್ಷರು ವಾಗ್ದಾನ ನೀಡಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಬುಧವಾರ ಮಾತನಾಡಿದ್ದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ` ಗಾಝಾ ಮತ್ತು ಲೆಬನಾನ್‍ನಲ್ಲಿ ಯುದ್ಧವನ್ನು ಅಂತ್ಯಗೊಳಿಸಲು ಬ್ರಿಕ್ಸ್ ನ ಸದಸ್ಯರು ತಮ್ಮ ಸಾಮೂಹಿಕ ಮತ್ತು ವೈಯಕ್ತಿಕ ಸಾಮರ್ಥ್ಯಗಳನ್ನು ಬಳಸುವಂತೆ ಆಗ್ರಹಿಸಿದ್ದರು.