ಜಿ20 ಶಕ್ತಿಗುಂದಿಸಲು ಪಾಶ್ಚಿಮಾತ್ಯರ ಪ್ರಯತ್ನ: ಅಮೆರಿಕದ ಟೀಕೆಗೆ ಚೀನಾ ಪ್ರತ್ಯುತ್ತರ
ಬೀಜಿಂಗ್: ಜಿ20 ಶೃಂಗಸಭೆಯನ್ನು ಹಾಳುಮಾಡಬೇಕೆಂದು ಚೀನಾ ಬಯಸಿದರೆ ಆ ಆಯ್ಕೆಯೂ ಅವರ ಎದುರಿಗಿದೆ ಎಂಬ ಅಮೆರಿಕದ ಹೇಳಿಕೆಗೆ ತಿರುಗೇಟು ನೀಡಿರುವ ಚೀನಾ, “ಪಾಶ್ಚಿಮಾತ್ಯರು ಜಿ20ರ ಶಕ್ತಿಗುಂದಿಸಲು ಬಯಸುತ್ತಿದ್ದಾರೆ. ಅದು ಅವರ ಪ್ರಮುಖ ಅಜೆಂಡಾದಲ್ಲಿ ಸೇರಿದೆ” ಎಂದು ಟೀಕಿಸಿದೆ.
ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ತಾನು ಯಾವ ಪಾತ್ರ ವಹಿಸಬೇಕು ಎಂಬುದನ್ನು ಚೀನಾವೇ ನಿರ್ಧರಿಸಬೇಕಿದೆ. ಶೃಂಗಸಭೆಗೆ ಬಂದು ಅದನ್ನು ಹಾಳು ಮಾಡಬೇಕೆಂದು ಬಯಸಿದರೆ ಆ ಆಯ್ಕೆಯೂ ಅವರಿಗೆ ಲಭ್ಯವಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ಹೇಳಿಕೆ ನೀಡಿದ್ದರು.
ಜಿ20 ಶೃಂಗಸಭೆಯಲ್ಲಿ ತಮ್ಮದೇ ಆದ ಕಾರ್ಯಸೂಚಿಯನ್ನು ಮುನ್ನೆಲೆಗೆ ತರುವುದು ಪಾಶ್ಚಿಮಾತ್ಯರ ಉದ್ದೇಶವಾಗಿದೆ. ಜಿ20ರ ಅಧ್ಯಕ್ಷನಾಗಿ ಭಾರತವು ಅರ್ಥವ್ಯವಸ್ಥೆಯ ಚೇತರಿಕೆ ಮತ್ತು ಬಹುಪಕ್ಷೀಯ ರಾಜತಾಂತ್ರಿಕತೆಯ ಮೇಲೆ ಗಮನ ಹರಿಸಲು ಬಯಸಿದರೆ ಪಾಶ್ಚಿಮಾತ್ಯರು ರಶ್ಯ-ಉಕ್ರೇನ್ ಸಂಘರ್ಷಕ್ಕೆ ಆದ್ಯತೆ ನೀಡುವ ಉದ್ದೇಶ ಹೊಂದಿದ್ದಾರೆ. ಭಾರತದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿಕೊಳ್ಳುವ ಅಮೆರಿಕ ಹಾಗೂ ಪಾಶ್ಚಿಮಾತ್ಯರು, ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಚಾರ ಮಾಡಲು ಹೆಚ್ಚು ಆಸಕ್ತಿ ಹೊಂದಿವೆ ಎಂದು ಸರಕಾರಿ ಸ್ವಾಮ್ಯದ `ಗ್ಲೋಬಲ್ ಟೈಮ್ಸ್'ನ ಸಂಪಾದಕೀಯ ಬರಹದಲ್ಲಿ ಪ್ರತಿಪಾದಿಸಲಾಗಿದೆ.
ಚೀನಾವು ಜಿ20 ಶೃಂಗಸಭೆಯಲ್ಲಿ ರಚನಾತ್ಮಕ ಪಾತ್ರ ವಹಿಸಬೇಕು ಎಂಬ ಅಮೆರಿಕದ ಸಲಹೆಗೆ ಪ್ರತಿಕ್ರಿಯಿಸಿರುವ ಚೀನಾ ` ಶೃಂಗಸಭೆಗೂ ಮುನ್ನ ಅಮೆರಿಕವು `ಜಿ20 ಶೃಂಗಸಭೆಯಲ್ಲಿ ವಿಧ್ವಂಸಕ ಪಾತ್ರ' ವಹಿಸಬಾರದು ಎಂದು ಅನಗತ್ಯವಾಗಿ ಚೀನಾಕ್ಕೆ ಎಚ್ಚರಿಕೆ ನೀಡಿದೆ. ಆದರೆ ಅಮೆರಿಕಕ್ಕೆ ಈ ಪದಗಳು (ವಿಧ್ವಂಸಕ ಪಾತ್ರ) ಹೆಚ್ಚು ಸೂಕ್ತವಾಗುತ್ತದೆ' ಎಂದಿದೆ. ಹೊಸದಿಲ್ಲಿಯ ಜಿ20 ಶೃಂಗಸಭೆಯಲ್ಲಿ ಜಂಟಿ ನಿರ್ಣಯಕ್ಕೆ ನಿರಾಕರಿಸುವ ಬೆದರಿಕೆ ಒಡ್ಡುವ ಮೂಲಕ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ರಶ್ಯವನ್ನು ಖಂಡಿಸುವ ನಿರ್ಣಯಕ್ಕೆ ಬಲವಂತಪಡಿಸಲಿವೆ. ಭಾರತದ ಅಧ್ಯಕ್ಷತೆಯನ್ನು ಬಳಸಿಕೊಂಡು, ಚೀನಾ ಮತ್ತು ಭಾರತದ ನಡುವಿನ ಪೈಪೋಟಿಯನ್ನು ಉತ್ಪ್ರೇಕ್ಷಿಸುವ ಮೂಲಕ ಭಾರತ-ಚೀನಾ ಬಿಕ್ಕಟ್ಟನ್ನು ಇನ್ನಷ್ಟು ಪ್ರಚೋದಿಸುವುದು ಪಾಶ್ಚಿಮಾತ್ಯರ ಉದ್ದೇಶವಾಗಿದೆ ಎಂದು ಚೀನಾ ಹೇಳಿದೆ.
ಜಿ20 ಮೂಲೆಗುಂಪು ಮಾಡಲು ಅಮೆರಿಕದ ಪ್ರಯತ್ನ: ಚೀನಾ
`ಜಗತ್ತಿಗೆ ಈಗಲೂ ಜಿ20 ವೇದಿಕೆಯ ಅಗತ್ಯವಿದೆಯೇ? ಎಂದು ನ್ಯೂಯಾರ್ಕ್ ಟೈಮ್ಸ್‍ನಲ್ಲಿ ಪ್ರಕಟವಾದ ವರದಿಯ ಬಗ್ಗೆ ಉಲ್ಲೇಖಿಸಿದ ಚೀನಾ `ಅಮೆರಿಕ ಮತ್ತು ಪಾಶ್ಚಿಮಾತ್ಯರು ಇದನ್ನೇ ಬಯಸುತ್ತಿದ್ದಾರೆ. ಜಿ20 ಅನ್ನು ಮೂಲೆಗುಂಪು ಮಾಡುವುದು ಅವರ ಉದ್ದೇಶವಾಗಿದೆ ಎಂದಿದೆ.
ಕಳೆದ ವರ್ಷ ಇಂಡೊನೇಶ್ಯಾದ ಬಾಲಿಯಲ್ಲಿ ನಡೆದ ಶೃಂಗಸಭೆಯ ನಂತರ ಅವರು ಜಿ20 ವೇದಿಕೆಯನ್ನು ಹರಿದು ಹಾಕಲು ಬಯಸುವ ಪ್ರವೃತ್ತಿಯನ್ನು ತೋರಿದ್ದಾರೆ. ಈ ವರ್ಷ ಜಿ20ರ ಶಕ್ತಿಗುಂದಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ' ಎಂದು ಚೀನಾ ಟೀಕಿಸಿದೆ.