ಜಿಂಬಾಬ್ವೆಯಲ್ಲಿ ಕಾಲರಾ ಉಲ್ಬಣ 100 ಮಂದಿ ಮೃತ್ಯು
Update: 2023-10-05 17:03 GMT
ಹರಾರೆ : ಜಿಂಬಾಬ್ವೆಯಾದ್ಯಂತ ಕಾಲರಾ ಏಕಾಏಕಿ ಹರಡುತ್ತಿದ್ದು ಸುಮಾರು 100 ಜನರು ಈ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಗುರುವಾರ ಹೇಳಿದೆ.
2018ರ ಬಳಿಕದ ಅತೀ ದೊಡ್ಡ ಉಲ್ಬಣವು ಅನೈರ್ಮಲ್ಯ ಪರಿಸ್ಥಿತಿ ಹಾಗೂ ಒಳಚರಂಡಿ ಅವ್ಯವಸ್ಥೆಯಿಂದ ಉಂಟಾಗಿದೆ. ಇದುವರೆಗೆ 4,609 ಶಂಕಿತ ಪ್ರಕರಣಗಳಲ್ಲಿ 935 ಪ್ರಕರಣ ದೃಢಪಟ್ಟಿದೆ. ಸುಮಾರು 100 ಜನ ಮೃತಪಟ್ಟಿರುವುದಾಗಿ ವರದಿಯಾಗಿದ್ದು 30 ಸಾವಿನ ಪ್ರಕರಣ ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೂನ್ನಲ್ಲಿ ನೆರೆಯ ದಕ್ಷಿಣ ಆಫ್ರಿಕಾದಲ್ಲಿ 15 ವರ್ಷಗಳಲ್ಲೇ ಕಾಲರಾದ ಅತ್ಯಧಿಕ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನ ಮಲಾವಿ ದೇಶದಲ್ಲಿ ಕಾಲರಾ ಹರಡಿತ್ತು. ಜಿಂಬಾಬ್ವೆಯಲ್ಲಿ 2008 ಮತ್ತು 2009ರಲ್ಲಿ ಕಾಲರಾ ರೋಗದಿಂದ 4,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.