ಕ್ರಿಸ್ಮಸ್ ಹಿನ್ನೆಲೆ: ಶ್ರೀಲಂಕಾದಲ್ಲಿ 1004 ಕೈದಿಗಳಿಗೆ ಕ್ಷಮಾದಾನ; ಬಿಡುಗಡೆ
ಕೊಲಂಬೊ: ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ದೇಶದಾದ್ಯಂತದ ಜೈಲುಗಳಲ್ಲಿರುವ 1,004 ಕೈದಿಗಳಿಗೆ ಕ್ಷಮಾದಾನ ನೀಡಲಾಗಿದ್ದು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಬಿಡುಗಡೆಗೊಂಡವರಲ್ಲಿ ಬಾಕಿ ಇರುವ ದಂಡದ ಮೊತ್ತವನ್ನು ಪಾವತಿಸಲು ಸಾಧ್ಯವಾಗದೆ ಜೈಲಿನಲ್ಲಿ ಉಳಿದಿರುವ ಶ್ರೀಲಂಕನ್ನರೂ ಸೇರಿದ್ದಾರೆ ಎಂದು ಬಂದೀಖಾನೆ ಆಯುಕ್ತ ಗಾಮಿನಿ ದಿಸ್ಸನಾಯಕೆ ಹೇಳಿದ್ದಾರೆ. ಬೌದ್ಧರು ಬಹುಸಂಖ್ಯಾತರಾಗಿರುವ ಶ್ರೀಲಂಕಾದಲ್ಲಿ ಮೇ ತಿಂಗಳಿನಲ್ಲಿ ಬೌದ್ಧ ಪೂರ್ಣಿಮೆ ಆಚರಣೆ ಸಂದರ್ಭದಲ್ಲೂ ಸುಮಾರು 1000 ಕೈದಿಗಳಿಗೆ ಕ್ಷಮಾದಾನ ದೊರಕಿತ್ತು.
ಈ ಮಧ್ಯೆ, ಶ್ರೀಲಂಕಾ ಸರಕಾರ ಕಳೆದ ವಾರ ಆರಂಭಿಸಿದ್ದ ಮಾದಕ ವಸ್ತು ವಿರುದ್ಧದ ಕಾರ್ಯಾಚರಣೆಗೆ ಕ್ರಿಸ್ಮಸ್ ಹಿನ್ನೆಲೆಯಲ್ಲಿ ರವಿವಾರದಿಂದ ಬಿಡುವು ನೀಡಲಾಗಿದೆ . ಕಾರ್ಯಾಚರಣೆಯಲ್ಲಿ 13,666 ಶಂಕಿತರನ್ನು ಬಂಧಿಸಲಾಗಿದ್ದು ಸುಮಾರು 1,100 ಮಾದಕ ವಸ್ತು ವ್ಯಸನಿಗಳನ್ನು ಕಡ್ಡಾಯ ವ್ಯಸನಮುಕ್ತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸರಕಾರ ಘೋಷಿಸಿದೆ.
ಶ್ರೀಲಂಕಾದ ಜೈಲುಗಳಲ್ಲಿ ಮಿತಿಗಿಂತ ಅಧಿಕ ಕೈದಿಗಳನ್ನು ಇರಿಸಲಾಗಿದ್ದು 11,000 ಕೈದಿಗಳನ್ನು ಇಡುವ ಸಾಮಥ್ರ್ಯದ ಜೈಲುಗಳಲ್ಲಿ 30,000ಕ್ಕೂ ಅಧಿಕ ಕೈದಿಗಳಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.